ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಪಕ್ಷದ ಮುಖಂಡರಾದ ಯಲ್ಲಪ್ಪ ಕ್ಯಾದಿಗೇರಿ, ರಾಮಪ್ಪ ನಾಯ್ಕರ, ಗಣೇಶ ಲಗಳಿ, ನರೇಂದ್ರ ಕುಪ್ಪಸ್ತ ಉಪಸ್ಥಿತರಿದ್ದರು 
ಜಿಲ್ಲೆ

ಜಿಲ್ಲೆಯಿಂದ ೫ ಸಾವಿರ ಜನ ಭಾಗಿ

ಬಾಗಲಕೋಟೆ: ಬಳ್ಳಾರಿಯಲ್ಲಿ ನ.೨೦ ರಂದು ಹಮ್ಮಿಕೊಂಡಿರುವ ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯಮಟ್ಟದ ಸಮಾವೇಶಕ್ಕೆ ಜಿಲ್ಲೆಯಿಂದ ೫ ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹೇಳಿದರು.
ಸಮಾವೇಶದಲ್ಲಿ ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ೩೮೫ ವಾಹನಗಳಲ್ಲಿ ತೆರಳಲಿದ್ದಾರೆ. ಸಮಾವೇಶಕ್ಕೆ ಅಂದಾಜು ೧೦ ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಕೋರ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಸರ್ಕಾರವು ಮೀಸಲಾತಿ ವಿರೋಧಿಗಳು ಎಂದು ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ್ದನ್ನು ಜನತೆಯಲ್ಲಿ ಬಿತ್ತುತ್ತಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಕಾರ್ಯದಲ್ಲಿ ಸಚಿವ ಶ್ರೀರಾಮುಲು ಅವರ ಪಾತ್ರ ಮಹತ್ವದ್ದಾಗಿದೆ. ಮೀಸಲಾತಿ ಹೆಚ್ಚಳದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಬರುವ ೨೦೨೩ ರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಸಮುದಾಯಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಸಮುದಾಯದ ತಳವಾರ, ಮತ್ತಿತರ ಪಂಗಡಗಳಿಗೆ ಮಾತ್ರವೇ ಎಸ್‌ಟಿ ಸೌಲಭ್ಯ ದೊರೆಯುವ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಸಚಿವ ಶ್ರೀರಾಮುಲು ಅವರು ಮುಖ್ಯಮಂತ್ರಿಗಳೊಂದಿಗೆ ಎರಡ್ಮೂರು ದಿನಗಳಲ್ಲಿ ಚರ್ಚಿಸಿ ತೀರ್ಮಾನಿಸಿ ಗೊಂದಲ ನಿವಾರಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಮುಖಂಡರಾದ ಯಲ್ಲಪ್ಪ ಕ್ಯಾದಿಗೇರಿ, ರಾಮಪ್ಪ ನಾಯ್ಕರ, ಗಣೇಶ ಲಗಳಿ, ನರೇಂದ್ರ ಕುಪ್ಪಸ್ತ ಉಪಸ್ಥಿತರಿದ್ದರು.