ಜಿಲ್ಲೆ

ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ವಿಫಲ

ಸದೇಶ್ ಕಾರ್ಮಾಡ್

ಮೈಸೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎನ್.ಜೆ. ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಹಲವು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ, ರೈತರಿಗೆ ಸರ್ಕಾರ ಪರಿಹಾರ ನೀಡಿಲ್ಲ. ಬರ ಮತ್ತು ಪ್ರವಾಹ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು ಜಿಲ್ಲಾಧಿಕಾರಿ ಖಾತೆಯಲ್ಲಿ ಕೋಟ್ಯಾಂತರ ರೂ. ಅನುದಾನ ಮೀಸಲಿರಿ ಸಲಾಗಿದೆ. ಆದರೆ, ಈ ಅನುದಾನವನ್ನು ಸರ್ಕಾರ ಬಳಸಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾಗಲಿ ಅಥವಾ ಕಾಂಗ್ರೆಸ್ ಶಾಸಕರಾಗಲಿ ಬರ ಅಧ್ಯಯನ ನಡೆಸದೆ ಇರುವುದು ದುರಂತವೇ ಸರಿ. ಇತ್ತೀಚೆಗೆ ಕೇಂದ್ರದ ತಂಡ ಬರ ಅಧ್ಯಯನವನ್ನು ಕೈಗೊಂಡಂತಹ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡದೆ ಇರುವಂತದ್ದು ಕೂಡ ರಾಜ್ಯ ಸರ್ಕಾರದ ವೈಫಲ್ಯಕ್ಕೆ. ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಜಾರಿ ಮಾಡುವ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ. ರಾಜ್ಯದಲ್ಲಿ ಬರಗಾಲದಿಂದ ಎದುರಾಗಿರುವ ಭೀಕರ ಪರಿಸ್ಥಿತಿ ಅರಿಯಲು ಬಿಜೆಪಿ ನಾಯಕರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.

ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆ.ಜಿ. ಅಕ್ಕಿ ನೀಡಲಾಗುವುದು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ ರಾಜ್ಯ ಸರ್ಕಾರ ಪ್ರಸ್ತುತ ನೀಡುತ್ತಿರುವುದು 5 ಕೆ.ಜಿ. ಅಕ್ಕಿ ಮಾತ್ರ. ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆರಳು ತೋರುತ್ತಿದ್ದಾರೆ. ಹಾಗಿದ್ದಲ್ಲಿ ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಾ.ಕೆ.ವಸಂತ ಕುಮಾರ್, ಸೋಮಸುಂದರ್, ಪ್ರದೀಪ್ ಇದ್ದರು.