ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಐದು ತಿಂಗಳ ಅವಧಿಯಲ್ಲಿ ಬರೋಬರಿ 1,05,923 ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿರುವುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಂಕಿ ಅಂಶದ ದಾಖಲೆ ಬಿಡುಗಡೆ ಮಾಡಿದ ಅವರು, ಜೂನ್‌ನಲ್ಲಿ 21,755 ಮತ್ತು ಜುಲೈನಲ್ಲಿ 21,988, ಆಗಸ್ಟ್‌ನಲ್ಲಿ 22,528, ಸೆಪ್ಟಂಬರ್‌ನಲ್ಲಿ 20,160 ಹಾಗೂ ಅಕ್ಟೋಬರ್‌ನಲ್ಲಿ 19,492 ಎಫ್‌ಐಆರ್ ದಾಖಲಾಗಿದೆ. ಇನ್ನು ಈ ಪೈಕಿ ಇದೇ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1,023, ಮಹಿಳೆಯರ ಮೇಲೆ 9,436 ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ 3,390 ಪ್ರಕರಣ ದಾಖಲಾಗಿದೆ. ಈ ಅಂಕಿ ಅಂಶವನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಕ್ರಿಮಿನಲ್ ಪ್ರಕರಣಗಳು ಮರುಕಳಿಸುತ್ತಿರುವುದನ್ನು ತೋರಿಸುತ್ತಿದೆ. ಜತೆಗೆ ದಲಿತರು, ಹೆಣ್ಣು ಮಕ್ಕಳು ಮತ್ತು ನಾಗರಿಕರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಕ್ಟೋಬರ್‌ನಲ್ಲಿ ಈದ್ ಮಿಲಾದ್ ಹಬ್ಬದಂದು ಶಿವಮೊಗ್ಗದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂ ಯುವಕರು ಹಿಂದುಗಳ ಮೇಲೆ ಹಲ್ಲೆ ನಡೆಸಿ ಅಶಾಂತಿ ಸೃಷ್ಠಿಸಿದರು. ಈ ಸಂಬಂಧ ಆರೋಪಿಗಳನ್ನು ಕಾನೂನು ರೀತಿಯ ಶಿಕ್ಷೆಗೊಳಪಡಿಸದೇ ರಾಜ್ಯಸರ್ಕಾರ ರಕ್ಷಣೆ ನೀಡಿತ್ತು. ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿನಿಯರು ಶೌಚಗೃಹದಲ್ಲಿದ್ದ ವಿಡಿಯೋವನ್ನು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಮಾಡಿದ ಪ್ರಕರಣ ನಡೆದಿತ್ತು. ಇನ್ನು ಭದ್ರಾವತಿ ಶಾಸಕ ಸಂಗಮೇಶ್ ಬೆಂಬಲಿಗರು ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಸರಿಯಾದ ಕ್ರಮವೇ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ಕೋಲಾರದಲ್ಲಿ ನಡೆದ ಮುಸ್ಲಿಂ ಕಾರ್ಯಕ್ರಮದಲ್ಲಿ ಖಡ್ಗ ಝಳಪಿಸುವ ಮೂಲಕ ಹಿಂದುಗಳಿಗೆ ಜೀವ ಭಯವೊಡ್ಡಲಾಗಿದೆ. ಇಂತಹ ಶಕ್ತಿಗಳನ್ನು ಧಮನ ಮಾಡಬೇಕಿದ್ದ ರಾಜ್ಯಸರ್ಕಾರ ಮತಕ್ಕಾಗಿ ಆ ಸಮುದಾಯದ ಓಲೈಕೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದರು. ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದ ಬಗ್ಗೆ ರಾಜ್ಯಸರ್ಕಾರ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಟೀಕಿಸಿದರು.
ಮಂಗಳೂರಿನಲ್ಲಿ ಮೂವರು ಬಜರಂಗದಳದ ಕಾರ್ಯಕರ್ತರಿಗೆ ಗಡಿಪಾರಿನ ಶಿಕ್ಷೆ ನೀಡಲಾಗಿದೆ. ರಾಜ್ಯಸರ್ಕಾರದ ಆಡಳಿತದಲ್ಲಿ ಬಳ್ಳಾರಿಯಲ್ಲಿ ಐಸಿಸ್ ಚಟುವಟಿಕೆ ನಡೆಯುತ್ತಿದೆ. ಪುತ್ತೂರು ಪೊಲೀಸರು ಹಿಂದು ಪರಿಷತ್ ಕಾರ್ಯಕರ್ತನಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಸರಿಯಾದ ಆಡಳಿತ ಕೊಡದಿದ್ದರೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ಸಂಸತ್ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸುವ ಮೂಲಕ ವಿಪಕ್ಷ ಸಂಸದರು ಅವಮಾನವೆಸಗಿದ್ದಾರೆ. ಮಹಿಳಾ ಮೀಸಲಾತಿ, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ದಿಗೆ ಪೂರಕವಾಗುವ ಮಸೂದೆಗಳನ್ನು ಜಾರಿಗೊಳಿಸಲು ತೊಂದರೆ ಕೊಡುವುದರ ಜತೆಗೆ ಉಪ ರಾಷ್ಟ್ರಪತಿಯವರನ್ನು ಅಣಕಿಸುವ ಪ್ರೌವೃತಿ ತೋರಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ಮುನಿರಾಜು, ವಸಂತಕುಮಾರ್, ನಾಗಾನಂದ ಇದ್ದರು.