ವಿಟ್ಲ: ಶಾಸಕರು ಮತ್ತು ಅಧಿಕಾರಿಗಳು ಅನುದಾನ ವಿತರಣೆಯಲ್ಲಿ ತಾರತಮ್ಯವೆಸಗಿದ್ದರ ವಿರುದ್ಧ ೧೨ ಮಂದಿ ಬಿಜೆಪಿ ಸದಸ್ಯರು ವಿಟ್ಲ ಪ.ಪಂ.ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವಿಟ್ಲ ಪ.ಪಂ.ಸದಸ್ಯ ಅರುಣ್ ಎಂ.ವಿಟ್ಲ ಮಾತನಾಡಿ ಅನುದಾನಗಳನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಿರುವ ವಿಚಾರದಲ್ಲಿ ಶಾಸಕರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಸ್ಪಂದಿಸಿಲ್ಲ. ಅದಕ್ಕಾಗಿ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸರಕಾರದ ೧೫ನೇ ಹಣಕಾಸು ಯೋಜನೆಯ ಅನುದಾನವೂ ಬಂದಿದೆ. ಅದನ್ನು ಪಕ್ಷಬೇಧವಿಲ್ಲದೇ ಹಂಚಬೇಕು. ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಆಡಳಿತ ಅಧಿಕಾರಿ ಹಾಗೂ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಆಗಮಿಸಿ, ಪ್ರತಿಭಟನಕಾರರಿಂದ ಮನವಿ ಪಡೆದು, ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್ ಸಿ.ಎಚ್., ವಿಜಯಲಕ್ಷ್ಮೀ, ಸುನಿತಾ ಪೂಜಾರಿ, ರಕ್ಷಿತಾ ಸನತ್, ಸಂಗೀತಾ, ಜಯಂತ್ ಚಂದಪ್ಪಾಡಿ, ಕರುಣಾಕರ ನಾಯ್ತೊಟ್ಟು, ಎನ್.ಕೃಷ್ಣ, ಅಶೋಕ್ ಕುಮಾರ್ ಶೆಟ್ಟಿ, ವಸಂತ ಪುಚ್ಚೆಗುತ್ತು ಉಪಸ್ಥಿತರಿದ್ದರು.