ಮಂಡ್ಯ: ಕೆ.ಆರ್.ಪೇಟೆ ಉಪ ಚುನಾವಣೆಯಿಂದ ಜಿಲ್ಲೆಯಲ್ಲಿ ರಾಜಕೀಯ ಪರಿವರ್ತನೆ ಆರಂಭವಾಗಿದೆ. ಸಾಕಷ್ಟು ಯುವಕರು ಬಿಜೆಪಿ ಕಡೆ ಬರುತ್ತಿದ್ದು, ಇದರೊಂದಿಗೆ ಪರಿವರ್ತನೆ ಮುಂದುವರಿಯಲಿದೆ. ಅಂತೆಯೇ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಯೋಜನೆ ಸಿದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊಡುಗೆ ನೀಡಬೇಕು. ಕೆ.ಆರ್.ಪೇಟೆ ಉಪ ಚುನಾವಣೆ, ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಹೇಳಿದ್ದರು. ಆದರೆ ಜೆಡಿಎಸ್‌ನಿಂದ ನೂರಾರು ಕೋಟಿ ರೂ ಖರ್ಚು ಮಾಡಬೇಕಾಯಿತು. ಕೊನೆಗೆ ಗೆದ್ದಿದ್ದು ಯಾರು?. ಮಂಡ್ಯ ಜಿಲ್ಲೆಯ ಮಾಲೀಕರು ಮತದಾರರು. ಅವರು ಯಾವ ಕಾಲಕ್ಕೆ ಯಾವ ತೀರ್ಮಾನ ಕೊಟ್ಟು ತೋರಿಸಿದ್ದಾರೆ ಎಂದರು.
ಸಿಎಂ ಮಾಡುವಂತೆ ಡಿಕೆಶಿ ಒಕ್ಕಲಿಗ ಸಮುದಾಯದ ಮುಂದೆ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇನು ಗೌಡನಲ್ವ, ನಾರಾಯಣಗೌಡ್ರು ಗೌಡರಲ್ವ. ಒಂದು ಜಾತಿಯ ಮೇಲೆ ರಾಜಕೀಯ ಮಾಡೋದಕ್ಕೆ ಆಗುತ್ತಾ?. ಒಕ್ಕಲಿಗರ ಸಂಘದ ಚುನಾವಣೆಗೆ ಡಿ.ಕೆ.ಶಿವಕುಮಾರ್ ಅವರನ್ನು ನಿಲ್ಲಿಸೋಣ. ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಾಗ ಅವರು ಸ್ಪರ್ಧೆ ಮಾಡಬಹುದು ಎಂದು ವ್ಯಂಗ್ಯವಾಡಿದ ಅವರು, ಈಗ ನಡೆಯುವುದು ವಿಧಾನಸಭಾ ಚುನಾವಣೆ. ಎಲ್ಲ ಜಾತಿಯ ಜನರು ಕೂಡ ನಮ್ಮ ಜತೆ ಇರಬೇಕು. ಜಾತಿ ಚುನಾವಣೆ ನಡೆಯುತ್ತವೆ. ಆಗ ಅವರು ಹೋಗಿ ಸ್ಪರ್ಧೆ ಮಾಡಬಹುದು. ಅ ಸಮಯದಲ್ಲಿ ಅವರವರ ಜಾತಿ ಮತದಾರರೇ ಮತ ಹಾಕುತ್ತಾರೆ ಎಂದರು.