ಮಡಿಕೇರಿ:
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜೂ.೨೦ರಂದು ವಿರಾಜಪೇಟೆಯಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆ ಸಂದರ್ಭ ಶಾಸಕ ಪೊನ್ನಣ್ಣ ಪ್ರತಿಕೃತಿ ದಹನ ಪ್ರಕರಣಕ್ಕೆ ಕಾಂಗ್ರೆಸ್ ಜನಾಂಗೀಯ ಸ್ಪರ್ಶ ನೀಡಿರುವುದು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಬಿಜೆಪಿಯ ವಿವಿಧ ಮೋರ್ಚಾಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳವಾರ ಮಡಿಕೇರಿಯಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮೋರ್ಚಾ, ಯುವ ಮೋರ್ಚಾ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ಮಾದರಿಯ ಪ್ರತಿಭಟನೆಯ ಹಕ್ಕನ್ನು ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಆಡಳಿತ ಪಕ್ಷದ ಜನ ವಿರೋಧಿ ಧೋರಣೆಯನ್ನು ವಿರೋಧ ಪಕ್ಷಗಳು ವಿರೋಧಿಸುವುದು ಸಾಮಾನ್ಯ. ಇದೇ ರೀತಿಯಲ್ಲಿ ಪೆಟ್ರೋಲ್, ಡೀಸೆಲ್‌ದರ ಏರಿಕೆ ವಿರೋಧಿಸಿ ವಿರಾಜಪೇಟೆಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ವಿರುದ್ದ ಪ್ರಕರಣ ದಾಖಲಿಸಿರುವುದು ಖಂಡನೀಯ. ಪ್ರತಿಕೃತಿ ದಹನ ರಾಜಕೀಯ ವ್ಯವಸ್ಥೆಯ ಪ್ರತಿಭಟನೆಯಲ್ಲಿ ಸಹಜ. ಈ ಹಿಂದೆ ಬಿಜೆಪಿ ಶಾಸಕರ ಪ್ರತಿಕೃತಿ ದಹನವನ್ನೂ ಮಾಡಲಾಗಿತ್ತು. ಆಗ ಇದನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕಾರ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಈಗ ಇದಕ್ಕೆ ಜಾತಿಯ ಬಣ್ಣ ಹಚ್ಚಿದೆ. ಈ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವವರ ವಿರುದ್ಧ ಪೊಲೀಸ್ ಕೇಸ್ ಮಾಡಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಸಮಿತಿ ಸದಸ್ಯೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಮಾತನಾಡಿ ವಿರಾಜಪೇಟೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ನಡೆಸಲಾಗಿತ್ತು. ಅದು ಯಾರ ವಿರುದ್ಧವೂ ನಡೆದ ವ್ಯಯಕ್ತಿಕ ಪ್ರತಿಭಟನೆ ಅಲ್ಲ. ಜಾಗೃತ ವಿರೋಧ ಪಕ್ಷವಾಗಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಕನ್ನಿಕಾ ದಿನೇಶ್, ಉಮಾ ಪ್ರಭು, ವಿರಾಜಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ಬೋಜಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ, ಪ್ರತಿಭಟನೆಯ ಒಂದು ಭಾಗವಾಗಿರುವ ಪ್ರತಿಕೃತಿ ದಹನವನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡಬೇಕೇ ಹೊರತೂ ವೈಯಕ್ತಿಕವಾಗಿ ಪರಿಗಣಿಸಿ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಬೆದರಿಕೆಗಳಿಗೆ ಬಿಜೆಪಿ ಅಂಜುವುದಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ವಿರೋಧ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷದ ಜನವಿರೋಧಿ ಧೋರಣೆ ವಿರುದ್ಧ ಜನಪರವಾಗಿ ಪ್ರತಿಭಟನೆ ನಡೆಸಿದೆ. ಸಾಂಕೇತಿಕವಾಗಿ ಕಾಂಗ್ರೆಸ್ ನಾಯಕರ ಪ್ರತಿಕೃತಿ ದಹಿಸಿದ್ದು, ಇದು ಪ್ರತಿಭಟನೆಯ ಒಂದು ಭಾಗವಾಗಿದೆಯಷ್ಟೆ. ಕಾಂಗ್ರೆಸ್ ಪಕ್ಷ ಕೂಡ ಪ್ರತಿಭಟನೆಗಳನ್ನು ನಡೆಸುವಾಗ ಪ್ರತಿಕೃತಿ ದಹಿಸಿದ ಉದಾಹರಣೆಗಳಿದೆ.
ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನೇ ಗುರಿ ಮಾಡಿ ಜಾತಿಯ ಬಣ್ಣ ಬಳಿಯುತ್ತಿರುವುದು ಕಾಂಗ್ರೆಸ್‌ನ ಕೀಳು ಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕೊಡಗಿನ ಜನ ಬಿಜೆಪಿ ಜೊತೆಯಲ್ಲಿದ್ದಾರೆ ಎನ್ನುವುದು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಾಬೀತಾಗಿದೆ. ಈ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಹತಾಶೆಗೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.
ಮೋರ್ಚಾದ ಉಪಾಧ್ಯಕ್ಷ ಕೋಲೆಯಂಡ ಗಿರೀಶ್, ಪುಲಿಯೇರಿ ಸುದೀಶ್, ವಿರಾಜಪೇಟೆ ಮಂಡಲದ ಅಧ್ಯಕ್ಷ ಪಿ.ಟಿ.ನವೀನ್ ಉತ್ತಯ್ಯ ಸುದ್ದಿಗೊಷ್ಠಿಯಲ್ಲಿ ಇದ್ದರು.
ಮತ್ತೊಂದು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಕಾಂಗ್ರೆಸ್ ಶಾಸಕರ ಕುಮ್ಮಕ್ಕಿನಿಂದ ಬಿಜೆಪಿ ಕಾರ್ಯಕರ್ತರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿದರೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಪ್ರತಿಭಟಿಸುವ ಹಕ್ಕು ವಿರೋಧ ಪಕ್ಷಗಳಿಗಿದೆ. ಆದರೆ ಜಿಲ್ಲೆಯ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುವವರ ವಿರುದ್ಧ ಸುಳ್ಳು ದೂರು ದಾಖಲಿಸುತ್ತಿದ್ದಾರೆ.
ದುರಾಡಳಿತ, ಭ್ರಷ್ಟಾಚಾರ, ಆಡಳಿತ ವೈಫಲ್ಯ, ಅಭಿವೃದ್ಧಿ ಶೂನ್ಯ ವ್ಯವಸ್ಥೆಯನ್ನು ಮುಚ್ಚಿ ಹಾಕಿ ಜನರ ಹಾದಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ವಿರೋಧ ಪಕ್ಷದ ಹೋರಾಟವನ್ನು ಹತ್ತಿಕ್ಕಲು ಮತ್ತು ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ದೂರು ದಾಖಲಿಸಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಜಿಲ್ಲಾವ್ಯಾಪಿ ಯುವ ಮೋರ್ಚಾದಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಚಿಮಂಡ ಪ್ರಸಾದ್ ಚಂಗಪ್ಪ ಮಾತನಾಡಿ, ಬಿಜೆಪಿ ಕಾರ್ಯಕರ್ತರು ದೂರು ನೀಡಿದರೆ ಪ್ರಕರಣ ದಾಖಲಿಸುತ್ತಿಲ್ಲ. ಆದರೆ ಬಿಜೆಪಿಯವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕೊಡಗಿನಲ್ಲಿ ಎಲ್ಲಾ ಸಮುದಾಯದವರು ಶಾಂತಿಯುತವಾಗಿ ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದಾರೆ. ಕೇವಲ ಪ್ರತಿಕೃತಿ ದಹನದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಒಂದು ಸಮುದಾಯವನ್ನು ಎಳೆದು ತರುವುದು ಖಂಡನೀಯ ಎಂದರು.
ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೊನ್ನಚೆಟ್ಟೀರ ವಿನೋದ್, ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ಚೇತನ್ ಬಂಗೇರ ಹಾಗೂ ಮಡಿಕೇರಿ ನಗರಾಧ್ಯಕ್ಷ ಪಾಂಡೀರ ಪೂಣಚ್ಚ ಸುದ್ದಿಗೋಷ್ಠಿಯಲ್ಲಿ ಇದ್ದರು