ಜಿಲ್ಲೆ

12 ಸ್ಥಳಗಳಲ್ಲಿ ನೇತ್ರ ತಪಾಸಣೆ ಶಿಬಿರ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ 61ನೇ ಜನ್ಮದಿನದ ಅಂಗವಾಗಿ ಧಾರವಾಡ ಗ್ರಾಮೀಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನ. 26 ಮತ್ತು 27ರಂದು ಜಿಲ್ಲೆಯ 12 ಸ್ಥಳಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26ರಂದು ತಾಲೂಕಿನ ಶಿರಗುಪ್ಪಿ ಗ್ರಾಮದೇವಿ ದೇವಸ್ಥಾನ, ನವಲಗುಂದ ತಾಲೂಕಿನ ಬ್ಯಾಲ್ಯಾಳ ಕಲ್ಮೇಶ್ವರ ದೇವಸ್ಥಾನ, ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಹನುಮಂತ ದೇವಸ್ಥಾನ, ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಫಕೀರೇಶ್ವರ ಮಠ, ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ, ಹೊನ್ನಾಪುರ ಗ್ರಾಮದ ಶ್ರೀ ಅಲಂಪ್ರಭು ದೇವಸ್ಥಾನ ಮತ್ತು ಸಂಗಮೇಶ್ವರ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಯಲಿದೆ ಎಂದರು.

27ರಂದು ನವಲಗುಂದ ಪಟ್ಟಣದ ಶ್ರೀ ಗ್ರಾಮದೇವತೆ ದೇವಸ್ಥಾನ, ಅಣ್ಣಿಗೇರಿಯ ರುದ್ರಮುನೇಶ್ವರ ದೇವಸ್ಥಾನ, ಕುಂದಗೋಳದ ಭೂತೇಶ್ವರ ದೇವಸ್ಥಾನ, ಅಳ್ನಾವರದ ಸಂಜೀವಿನಿ ಆಸ್ಪತ್ರೆ ಹಾಗೂ ಕಲಘಟಗಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶಿಬಿರ ನಡೆಯಲಿದೆ. ಕಿಮ್್ಸ, ವಾಸನ್ ಐ ಕೇರ್, ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಡಾ. ಅಗರವಾಲ್ಸ್ ಕಣ್ಣಿನ ಆಸ್ಪತ್ರೆ, ಜಯಪ್ರಿಯಾ ಆಸ್ಪತ್ರೆಗಳ ತಜ್ಞ ವೈದ್ಯರು ಶಿಬಿರ ನಡೆಸಿಕೊಡಲಿದ್ದಾರೆ. ಆದ್ದರಿಂದ ರೋಗಿಗಳು ಶಿಬಿರದ ಲಾಭ ಪಡೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂತೋಷ ಜೀವನಗೌಡರ, ದುಂಡಪ್ಪ ಶೆಟ್ಟರ, ಶ್ರೀಕಾಂತಗೌಡ ಪಾಟೀಲ, ಗುರುನಾಥಗೌಡ ಧರ್ಮಗೌಡರ, ರವಿಚಂದ್ರ ಹುಬ್ಬಳ್ಳಿ, ಮಂಜುನಾಥ ಬಂಡಿವಾಡ, ಹರೀಶ ಕೋನೇರಿ ಸೇರಿದಂತೆ ಇತರರು ಇದ್ದರು.