ಆರಗ ಜ್ಞಾನೇಂದ್ರ, ಶಾಸಕ  
ಜಿಲ್ಲೆ

ಕಸ್ತೂರಿ ರಂಗನ್ ವರದಿಗೆ ಬಿಜೆಪಿ ವಿರೋಧ: ಜ್ಞಾನೇಂದ್ರ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿಯನ್ನು ನಾವು ಆರಂಭದಲ್ಲೂ ವಿರೋಧಿಸಿದ್ದೆವು. ಈಗಲೂ ವಿರೋಧವಿದೆ. ಅರಣ್ಯ ರಕ್ಷಣೆಗೆ ಹೊಸ ಕಾನೂನುಗಳ ಅವಶ್ಯಕತೆಯಿಲ್ಲ. ಈಗಿರುವ ಕಾಯ್ದೆಗಳೇ ಸಾಕು. ನಾವು ಪರಿಸರ ವಿರೋಧಿಗಳಲ್ಲ. ಪರಿಸರದೊಂದಿಗೆ ಜನರ ಜೀವನವೂ ಸಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಬಗ್ಗೆ ಅರಣ್ಯ ಸಚಿವರು ಹಾಗೂ ಸಿಎಂ ನಡುವೆಯೇ ಒಮ್ಮತವಿಲ್ಲ. ಯಾವ ಕಾರಣಕ್ಕೂ ಆ ವರದಿಯನ್ನು ಜಾರಿಯಾಗಲು ರಾಜ್ಯ ಸರ್ಕಾರ ಬಿಡಬಾರದು. ಈಗ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಕ್ರೆಬೈಲು ಅಭಯಾರಣ್ಯದಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿರುವುದು ಖಂಡನೀಯ. ಇದು ಅರಣ್ಯ ಇಲಾಖೆ ಕಾನೂನು ಎಲ್ಲರಿಗೂ ಒಂದೇ ತೆರನಾಗಿಲ್ಲ ಎಂಬುದಕ್ಕೆ ನಿದರ್ಶನ. ಅಲ್ಲಿಗೆ ಮರಳು, ಇಟ್ಟಿಗೆ ಕೊಂಡೊಯ್ದು ಕಾಮಗಾರಿ ನಡೆದ ಮೇಲೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಬೇಜವಾಬ್ದಾರಿ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.