ಜಿಲ್ಲೆ

ದೇಶದಲ್ಲಿ ಏಕತೆ ಉಳಿವಿಗೆ ಸಂವಿಧಾನ ಕಾರಣ ಡಾ.ಬಿ.ಆರ್.ಅಂಬೇಡ್ಕರ್ 68ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಸಿ.ಟಿ.ರವಿ ಹೇಳಿಕೆ

ಹರೀಶ ಎಂ.

ಮಂಗಳೂರು: ವೈವಿಧ್ಯಮಯ ಸಂಸ್ಕೃತಿಯ ದೇಶ ಭಾರತದಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸುತ್ತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಭಾರತದಲ್ಲಿ ಏಕತೆ ಉಳಿದಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.


ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್‌ಅವರ 68ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.


ಪ್ರಸ್ತುತ ಪ್ರಾದೇಶಿಕತೆ, ಭಾಷೆ, ಜಾತಿ, ವೈಮನಸ್ಸುಗಳಿಂದ ಭಾರತವನ್ನು ಒಡೆಯುವ ಯತ್ನ ನಡೆಯುತ್ತಿದೆ. ಅವು ನಿಷ್ಪಲವಾಗಲು ಸಂವಿಧಾನವೇ ಕಾರಣ. ಸರ್ವಧರ್ಮ ಸಮಭಾವ ಹಾಗೂ ಸಹಿಷ್ಣತೆಯನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ.


ಆರಂಭದಲ್ಲಿ ಸಂವಿಧಾನ ರಚನೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ತಜ್ಞರ ಜತೆ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿತ್ತು. ನಂತರ ಅಂಬೇಡ್ಕರ್ ಅವರೇ ಸಂವಿಧಾನ ರಚಿಸಿಕೊಡಲಿ ಎಂದು ರಚನಾ ಸಮಿತಿ ಸೂಚಿಸಿತ್ತು. ಬಳಿಕ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿರುವುದು ನಮ್ಮ ಸೌಭಾಗ್ಯ ಎಂದರು.
ಕಳೆದ ನಾಲ್ಕೈದು ದಶಕಗಳಿಂದ ದೇಶದಲ್ಲಿ ಜಾತ್ಯತೀತತೆ ಬಹಳ ಚರ್ಚೆಯಲ್ಲಿದೆ. ಜಾತಿ ಇಲ್ಲದಿದ್ದರೆ ಅವರ ಅಸ್ತಿತ್ವವೇ ಹೋಗುತ್ತದೆ. ಅವರ ಹೆಸರಿನ ಮುಂದೆ ಜಾತಿ ಇಲ್ಲದಿದ್ದರೆ ಅವರಿಗೆ ನಾಯಕತ್ವವೇ ಇರುವುದಿಲ್ಲ. ಅಂತಹವರೇ ಹಿಂದು ಎಂದರೆ ಕೋಮುವಾದಿ ಎನ್ನುವುದು ವಿಪರ್ಯಾಸ ಎಂದರು.


ಫೈನಲ್ ಗೆಲುವು ನಮ್ಮದೇ
ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಮಿ ಫೈನಲ್ ಗೆಲವು ಮಾತ್ರವಲ್ಲ, ಫೈನಲ್ ಗೆಲವು ಕೂಡ ನಮ್ಮದೇ. ಈಗ ಕಾಂಗ್ರೆಸಿಗರು ಬಿಜೆಪಿ ಗೆದ್ದಲ್ಲಿ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ, ನಿಷ್ಪಕ್ಷಪಾತ ಚುನಾವಣೆಗೆ ಎಸಗುವ ಅಪಚಾರವಾಗಿದೆ. ಇಂತಹ ಅಪನಂಬಿಕೆ ಮೂಡಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಮುಂದೆ ಚುನಾವಣೆಗೆ ಸ್ಪರ್ಧಿಸದಂತೆ ನಿಬಂಧನೆ ವಿಧಿಸಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಹಿಂದುಳಿದ ವರ್ಗ ಜಿಲ್ಲಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭೋಜರಾಜ್ ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ನಿರೂಪಿಸಿದರು.