ಜಿಲ್ಲೆ

ಜಿಲ್ಲಾಧ್ಯಕ್ಷರ ನೇಮಕ ಗೊಂದಲಕ್ಕೆ ತಾತ್ಕಾಲಿಕ ತ್ಯಾಪೆ ಹಚ್ಚಿದ ಬಿಜೆಪಿ, ಎರಡು ಬಣವನ್ನೂ ಸಮಾಧಾನಪಡಿಸಲು ಯತ್ನ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ನಿಕಟಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ತಾತ್ಕಾಲಿಕವಾಗಿ ಹೊಣೆಯನ್ನು ಹೊರಿಸುವ ಮೂಲಕ ಬಿಜೆಪಿ ವರಿಷ್ಠರು ಭಿನ್ನಾಭಿಪ್ರಾಯಕ್ಕೆ ಬ್ರೇಕ್ ಹಾಕಿದ್ದು ಪಕ್ಷ ಸಂಘಟನೆ ಚುರುಕುಗೊಳಿಸುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ಎಂ.ರಾಮಲಿಂಗಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಟನೆ, ಕಾರ್ಯ ಚಟುವಟಿಕೆಯನ್ನು ನಿರ್ವಹಿಸಿಕೊಂಡು ಹೋಗಲು ವರಿಷ್ಠರು ನಿರ್ಧರಿಸಿದ್ದಾರೆ. ಇದರೊಂದಿಗೆ ಜಿಲ್ಲಾ ಮಟ್ಟದ ಗಾದಿಗೆ ಹೊಸಬರ ನೇಮಕ ಪ್ರಕ್ರಿಯೆಯು ಮುಂದೂಡಲ್ಪಟ್ಟಿದೆ.

*ಅಧ್ಯಕ್ಷ ಸ್ಥಾನ ಗೊಂದಲ
ಸ್ಥಳೀಯ ಬಹುತೇಕ ನಾಯಕರು ಹಾಗೂ ಪದಾಧಿಕಾರಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ, ನಿಕಟಪೂರ್ವ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂದೀಪ್ ಬಿ.ರೆಡ್ಡಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದರು. ಆದರೆ, ಇದಕ್ಕೆ ಸಂಸದ ಡಾ ಕೆ.ಸುಧಾಕರ್ ವಿರೋಧ ವ್ಯಕ್ತಪಡಿಸಿದ್ದರು. ಅಭಿಪ್ರಾಯವನ್ನು ಸಂಗ್ರಹಿಸದೇ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ ಎಂಬುದಾಗಿ ಆರೋಪಿಸಿದ್ದರು. ದೆಹಲಿ ಮಟ್ಟದ ವರಿಷ್ಠರಿಗೂ ದೂರು ಸಲ್ಲಿಸಿದ್ದರು. ಇದರಿಂದ ಆಯ್ಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.

*ಗಾದಿಗೆ ತೀವ್ರ ಪೈಪೋಟಿ
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ತೀವ್ರ ಪೈಪೋಟಿ ಉಂಟಾಗಿದ್ದು ಕಳೆದ 2023 ರ ಶಿಡ್ಲಟ್ಟ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸೀಕಲ್ ರಾಮಚಂದ್ರಗೌಡ, ನಿಕಟಪೂರ್ವ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂದೀಪ್ ಬಿ.ರೆಡ್ಡಿ, ಮುಖಂಡ ತಳಗವಾರ ಪ್ರತಾಪ್ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಸಂಸದರು ಹಾಗೂ ಮೂಲ ಬಿಜೆಪಿಗರ ಬಣವು ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ನಾಯಕರ ಮೇಲೆ ಒತ್ತಡ ಹೇರಿದ್ದರು. ಇದರ ನಡುವೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಸಿ.ಮುನಿರಾಜು, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವರು ಸಂದೀಪ್ ರೆಡ್ಡಿ ಹೆಸರು ಘೋಷಿಸುವಲ್ಲಿ ಯಶಸ್ವಿಯಾಗಿದ್ದರು.