ಜಿಲ್ಲೆ

ಬಿಜೆಪಿ ಒಬಿಸಿ ಮೋರ್ಚಾ ದೂರಿನಲ್ಲಿ ಹುರುಳಿಲ್ಲ

ತೀರ್ಥಹಳ್ಳಿ: ನೇರ ಸ್ಪರ್ಧೆಗೆ ಸಿದ್ಧವಿಲ್ಲದ ಬಿಜೆಪಿ ಸೋಲುವ ಭಯದಿಂದ ಇಲ್ಲದ ತಕರಾರುಗಳನ್ನು ತೆಗೆಯಲು ಪ್ರಾರಂಭಿಸಿದೆ. ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಿರುವ ಕಾರಣ ಅವರ ಪತಿ ಶಿವರಾಜ್‌ಕುಮಾರ್ ಚಿತ್ರಗಳು ಹಾಗೂ ಜಾಹೀರಾತು ಪ್ರಸಾರವನ್ನು ನಿಷೇಧಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಒಬಿಸಿ ಮೋರ್ಚಾ ಸಲ್ಲಿಸಿರುವ ದೂರು ಹಾಸ್ಯಾಸ್ಪದ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಆದರೆ ಅವರಿಗೆ ಪಕ್ಷದ ಬಿ ಫಾರಂ ದೊರೆತು ನಾಮಪತ್ರ ಸಲ್ಲಿಕೆಯಾದ ನಂತರದಲ್ಲಷ್ಟೇ ಇಂಡಿಯನ್ ಪೀಪಲ್ಸ್ ಆ್ಯಕ್ಟ್ ಪ್ರಕಾರ ಅಧಿಕೃತ ಅಭ್ಯರ್ಥಿಯಾಗುತ್ತಾರೆ. ಈ ಪ್ರಕ್ರಿಯೆಗೆ ಮುಂಚಿತವಾಗಿ ಮಾಡಲಾಗುವ ಖರ್ಚು-ವೆಚ್ಚಗಳು ಗೀತಾಗೆ ಅನ್ವಯವಾಗುವುದಿಲ್ಲ. ಅವರ ಪರವಾಗಿ ಬಂಗಾರಪ್ಪ ಮತ್ತು ಡಾ. ರಾಜ್ ಕುಟುಂಬದವರು ಪ್ರಚಾರ ಮಾಡುವುದಕ್ಕೆ ಯಾವ ಅಡೆತಡೆಯೂ ಇಲ್ಲ ಎಂದಿದ್ದಾರೆ.
ನೇರ ಯುದ್ಧಕ್ಕೆ ಸಿದ್ಧವಿಲ್ಲದ ಬಿಜೆಪಿಯು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗೆ ಕಡಿವಾಣ ಹಾಕಿದೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ತಿರುಗಾಡುವುದಕ್ಕೂ ಬಿಡಬಾರದೆಂಬ ನಿಲುವನ್ನು ಹೊಂದಿದೆ. ಗೀತಾ ಶಿವರಾಜ್‌ಕುಮಾರ್ ಅವರು ಗಾಂಧಿ, ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳ ಆದರ್ಶವನ್ನು ಅನುಸರಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ. ಜತೆಗೆ ಡಾ. ರಾಜ್‌ಕುಮಾರ್ ಕುಟುಂಬದ ಸೊಸೆ ಎಂಬ ಆತಂಕ ಕೂಡ ಬಿಜೆಪಿಗೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.