ಬಳ್ಳಾರಿ : ಸಂಡೂರು ಕ್ಷೇತ್ರದಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ರಾಜಮನೆತನದ
ಕಾರ್ತಿಕೇಯ ಘೋರ್ಪಡೆ ಬೆಂಬಲಿಗರಿಗೆ ಮನ್ನಣೆ ಹಾಕಿದ್ದ ಬಿಜೆಪಿ ಈ ಬಾರಿ ಹೊಸ ಅಭ್ಯರ್ಥಿ ಮಣೆ ಹಾಕಿದ್ದು ವರ ಅಥವಾ ಶಾಪವೊ ಎಂಬುದು ಕಾದು ನೋಡಬೇಕಿದೆ.
ಸಂಡೂರಿನಲ್ಲಿ ಎಂ. ವೈ. ಘೋರ್ಪಡೆ ಸೋಲಿಲ್ಲದ ಸರದಾರನಂತೆ ಏಳು ಬಾರಿ ಗೆಲುವು ಸಾಧಿಸಿದಲ್ಲದೆ, ಒಂದು ಅವಿರೋಧವಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕ್ಷೇತ್ರ ಮರು ವಿಂಗಡಣೆಗೆಯಾದ ಬಳಿಕ ಘೋರ್ಪಡೆ ಕುಟುಂಬದ ಬೆಂಬಲಿಗರಿಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಗಿಟ್ಟಿಸಿಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತ ಬಂದಿದ್ದರು. ಎಂ.ವೈ. ಘೋರ್ಪಡೆ ಪುತ್ರ ಕಾರ್ತಿಕೇಯ ಘೋರ್ಪಡೆ ಕೆಲ ಕಾ
ಣಗಳಿಂದ ಕಾಂಗ್ರೆಸ್ ನಿಂದ ಅಸಮಾಧಾನಗೊಂಡು 2018 ರಲ್ಲಿ ಅಮಿತಾ ಷಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ರಾಘವೇಂದ್ರ ಅವರನ್ನು ಬಿಜೆಪಿಗೆ ಕರೆ ತಂದು 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡರು. ಮತ್ತೋಮ್ಮೆ 2023 ರಲ್ಲಿ ಘೋರ್ಪಡೆ ಮಾತಿಗೆ ಬಿಜೆಪಿ ಮನ್ನಣೆ ಕೊಟ್ಟು ಕಳೆದ ಬಾರಿಯ ಸೋಲಿನ ಹಾಗೂ ಪತಿಯ ಮೃತ ಅನುಕಂಪ ಪಡೆಯಲು ರಾಘವೇಂದ್ರ ಪತ್ನಿ ಶಿಲ್ಪಾ ಟಿಕೆಟ್ ಕೊಡಿಸಿದರು. ಆದರೆ, ಬಿಜೆಪಿಯಿಂದ ಬಂಡಾಯ ಎದ್ದಿದ್ದ ದಿವಾಕರ್ ಸ್ಫರ್ಧೆಯಿಂದ ಮತ ವಿಭಜನೆಯಾಗಿ ಸೋತರು. ಬಿಜೆಪಿ ಈವರೆಗೆ ಗೌರವಪೂರ್ವಕವಾಗಿ ಕಳೆದ ಎರಡು ಚುನಾವಣೆಯಲ್ಲಿ ಬೆಂಬಲಿಗರಿಗೆ ಟಿಕೆಟ್ ನೀಡಿದ ಪರಿಣಾಮ ಘೋರ್ಪಡೆ ಕುಟುಂಬ ಬಿಜೆಪಿಗೆ ಬೆಂಬಲವಾಗಿ ನಿಂತಿತು.
ಈ ಉಪ ಚುನಾವಣೆಯಲ್ಲಿ ಮಾಜಿ ಸಂಸದ ವೈ.ದೇವೇಂದ್ರಪ್ಪ, ಪುತ್ರ ಅಣ್ಣಪ್ಪ, ಶಿಲ್ಪಾ ರಾಘವೇಂದ್ರ ಹೆಸರನ್ನು ಘೋರ್ಪಡೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗುತ್ತಿತ್ತು. ಏಕಾಏಕಿ ಈ ಬಾರಿ ಉಪ ಚುನಾವಣೆಯಲ್ಲಿ 2018 ರಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಂಗಾರು ಹನುಮಂತುಗೆ ಟಿಕೆಟ್ ನೀಡಿರುವುದು ಘೋರ್ಪಡೆ ಕುಟುಂಬಕ್ಕೆ ಒಂದಡೆ ಅಸಮಾಧಾನ ಮೂಡಿಸಿದೆ. ಅಲ್ಲದೆ, ಮಾಜಿ ಸಚಿವ ಜನಾರ್ದನರೆಡ್ಡಿ ಈ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಬೆನ್ನಲ್ಲೇ ಫುಲ್ ಅಕ್ಟೀವ್ ಆಗಿದ್ದರು. ರೆಡ್ಡಿ ಬೆಂಬಲಿತ ಕೆ. ಎಸ್ . ದಿವಾಕರ್ ಗೆ ಟಿಕೆಟ್ ಕೊಡಿಸಿ ಕ್ಷೇತ್ರದಲ್ಲಿ ಗೆದ್ದು ಬಿಜೆಪಿಯ ಹಳೆಯ ವರ್ಚಸ್ಸು ಹೆಚ್ಚಿಸಲು ಹಾಗೂ ಕಾಂಗ್ರೆಸ್ ಠಕ್ಕರ್ ನೀಡಲು ಮುಂದಾಗಿದ್ದರು. ಆದರೆ, ಈಗ ಇಬ್ಬರ ಬೆಂಬಲಿತಲ್ಲದೆ ಬೇರೊಬ್ಬ ಅಭ್ಯರ್ಥಿಯನ್ನು ಬಿಜೆಪಿ ಹೆಸರು ಘೋಷಿಸಿ ಇಬ್ಬರಿಗೂ ಆಶ್ಚರ್ಯ ಮೂಡಿಸಿದೆ. ಕ್ಷೇತ್ರದಲ್ಲಿ ರಾಜಮನೆತನದ ಘೋರ್ಪಡೆ ಕುಟುಂದ ತನ್ನದೆ ಅದ ಮತಗಳನ್ನು ಹಿಡಿದು ಇಟ್ಟುಕೊಂಡಿದೆ. ಈಗ ಮತಗಳ ಎಲ್ಲವೂ ಬಿಜೆಪಿಗೆ ವರ್ಗಾವಣೆಯಾಗಲಿದೆ ಎಂಬ ಅನುಮಾನವಿದೆ. ಸದ್ಯ ಬಂಗಾರು ಹನುಮಂತು ಘೋರ್ಪಡೆ ಹಾಗೂ ರೆಡ್ಡಿ ಜತೆಗೂಡಿ ಚುನಾವಣೆ ಆ ಅಖಾಡದಲ್ಲಿ ಧುಮುಕಿದರೆ ಮಾತ್ರ ಗೆಲುವು ಸುಲಭವಾಗಲಿದೆ.
ರೆಡ್ಡಿ ಮನೆಯ ಗುಟ್ಟು : ಮಾಜಿ ಸಚಿವ ಜನಾರ್ದನರೆಡ್ಡಿ ಯಾವ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳುತ್ತಾರೆ, ಅಲ್ಲಿ ಮನೆ ಮಾಡಿ ಜನರ ಪ್ರೀತಿ ಗಳಿಸುತ್ತಾರೆ. ಅದರಂತೆ 2018 ರಲ್ಲಿ ಮಾಜಿ ಸಚಿವ ಶ್ರೀರಾಮುಲು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ ವೇಳೆ ಗೆಳೆಯನ ಗೆಲುವಿಗಾಗಿ ಅಲ್ಲಿ ಮನೆ ಮಾಡಿ ಗೆಲುವಿಗೆ ಸಹಾಯವಾದರು. 2023 ರಲ್ಲಿ ಕೆಆರ್ ಪಿಪಿ ಯಿಂದ ಗಂಗಾವತಿ ಯಲ್ಲಿ ಸ್ಪರ್ಧಿಸಿದಾಗ ಕೂಡ ಕ್ಷೇತ್ರದಲ್ಲಿ ಮನೆ ಮಾಡಿ ಗೆದ್ದರು. ಸದ್ಯ ಸಂಡೂರು ಉಪ ಚುನಾವಣೆ ದಿನಾಂಕ ಘೋಷಣೆಯಾದ ಮರು ದಿನವೇ ಸಂಡೂರಿನಲ್ಲಿ ಗೃಹ ಪ್ರವೇಶ ಮಾಡಿ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ. ರೆಡ್ಡಿ ಪ್ರಚಾರ ನಡೆಸುವ ಪ್ರತಿಯೊಂದು ಕ್ಷೇತ್ರದಲ್ಲಿ ಮನೆ ಮಾಡುವುದು ಗೆಲುವಿನ ಗುಟ್ಟ ಎಂಬುದು ಈ ಚುನಾವಣೆ ಬಳಿಕ ತಿಳಿಯಲಿದೆ.
ಬಂಡಾಯದ ಬಿಸಿ : ಬಿಜೆಪಿಯಿಂದ ಸಂಡೂರು ಉಪಚುನಾವಣೆಯ ಟಿಕೆಟ್‌ಗಾಗಿ ಮಾಜಿ ಸಂಸದ ವೈ.ದೇವೇಂದ್ರಪ್ಪ, ಪುತ್ರ ಅಣ್ಣಪ್ಪ, ಕೆ.ಎಸ್.ದಿವಾಕರ್, ಶಿಲ್ಪಾ ರಾಘವೇಂದ್ರ ಸೇರಿದಂತೆ19 ಜನರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಇದರಲ್ಲಿ ಹೊರಗಿನವರಿಗಿಂತ ಸ್ಥಳೀಯರು ಹೆಚ್ಚಿದ್ದಾರೆ. ಈ ಎಲ್ಲ ಅಕಾಂಕ್ಷಿಗಳು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದು ತೀರಾ ವಿರಾಳ.