ಅನಿಲ್‌ಕುಮಾರ್ ಮೋಕಾ  
ಜಿಲ್ಲೆ

ಸಂಘಟನಾ ಚತುರನಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ

Bellari - Heera Nayak

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ವಿಫಲತೆ ಕಂಡಿದ್ದು, ಅದಕ್ಕಾಗಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೊಸ ಹೆಜ್ಜೆ ಇರಿಸಿದ್ದು, ಮೊದಲ ಹಂತದಲ್ಲೇ ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಹಾಕಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಲು ಈ ಬಾರಿ ಸಂಘಟನಾ ಚತುರ ಅನಿಲ್‌ಕುಮಾರ್ ಮೋಕಾ ಅವರನ್ನು ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ. ಯುವನಾಯಕ, ಸಂಘ-ಪರಿವಾರದ ಹಿನ್ನೆಲೆ ಹೊಂದಿರುವ ಅನಿಲ್‌ಗೆ ಜಿಲ್ಲಾಧ್ಯಕ್ಷ ಪಟ್ಟ ಸಿಕ್ಕಿದೆ. ಗೋನಾಳ್ ಮುರಹರಗೌಡ ಅವರು ಈ ಹಿಂದಿನ ಜಿಲ್ಲಾಧ್ಯಕ್ಷರಾಗಿದ್ದರು.

ಅನಿಲ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಅನಿಲ್‌ಕುಮಾರ್‌ರ ಹಿನ್ನೆಲೆ

ಅನಿಲ್ ಕುಮಾರ್ ಮೋಕಾ ಅವರು 1979ರಲ್ಲಿ ಜನಿಸಿದ್ದು, ಎಂ.ಎ., ಎಲ್‌ಎಲ್‌ಬಿ ಶಿಕ್ಷಣ ಮುಗಿಸಿದ್ದಾರೆ. ಬಲಿಜ ಸಮುದಾಯಕ್ಕೆ ಸೇರಿದ ಅವರು 2006ರಲ್ಲಿ ಎಬಿವಿಪಿಯ ಪೂರ್ಣವಧಿ ಕಾರ್ಯಕರ್ತರಾಗಿ ಕೆಲಸ ಆರಂಭಿಸುತ್ತಾರೆ. ನಂತರದಲ್ಲಿ ಹಂಪಿ ಉಳಿಸಿ ಆಂದೋಲನ ಸಮಿತಿಯ ಸಂಚಾಲಕರಾಗಿ ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಾರೆ.

ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಕಾರ್ಯದರ್ಶಿಯಾಗಿ, ಬಿಜೆಪಿಯಲ್ಲಿ ಬಳ್ಳಾರಿ ವಿಭಾಗದ ಸಂಘಟನಾ ಕಾರ್ಯದರ್ಶಿ, ಕಳೆದ ನಾಲ್ಕು ವರ್ಷದಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ರೇಸ್‌ನಲ್ಲಿ ಮಾಜಿ ಶಾಸಕ-ಹಾಲಿ ಎಂಎಲ್‌ಸಿ

ಜಿಲ್ಲಾಧ್ಯಕ್ಷ ಪಟ್ಟಕ್ಕಾಗಿ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ರೇಸ್‌ನಲ್ಲಿದ್ದರು. ಕೊನೆ ಹಂತದಲ್ಲಿ ಬದಲಾವಣೆಗೊಂಡಿದೆ. ಈ ಇಬ್ಬರು ನಾಯಕರಿಗೆ ಸಂಘಟನೆ, ಚತುರತೆ ಇದ್ದರೂ ಇಬ್ಬರಿಗೂ ಐವತ್ತು ವರ್ಷ ವಯಸ್ಸು ದಾಟಿದೆ.

ಹೀಗಾಗಿ ಯುವ ನಾಯಕರ ಹುಡುಕಾಟದಲ್ಲಿದ್ದ ಬಿಜೆಪಿ ಹೈಕಮಾಂಡ್ ಅನಿಲ್ ಕುಮಾರ್ ಅವರನ್ನು ನೇಮಕ ಮಾಡಿದೆ. ಈಗಾಗಲೇ ಎರಡು ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿರುವ ಸೋಮಶೇಖರ್ ರೆಡ್ಡಿ ಅನುಭವಿ ರಾಜಕಾರಣಿ, ಎಂಎಲ್‌ಸಿ ಸತೀಶ್ ಸರಳ ಮತ್ತು ಸಜ್ಜನಿಕೆ ರಾಜಕಾರಣಿ. ಇಬ್ಬರು ಹಿರಿಯರಾಗಿರುವುದರಿಂದ ಪಕ್ಷದ ಹೈಕಮಾಂಡ್ ನೂತನ ಜಿಲ್ಲಾಧ್ಯಕ್ಷ ಗಾದಿಗೆ ಹೊಸ ನಾಯಕನ ಆಯ್ಕೆ ಮಾಡಿದೆ.

ಮತ್ತೊಮ್ಮೆ ಮೋದಿ ಪ್ರಧಾನಿ ನಮ್ಮ ಗುರಿ

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಅದು ನಮ್ಮ ಗುರಿ ಮತ್ತು ಉದ್ದೇಶವಾಗಿದೆ ಎಂದು ನೂತನ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಜಿಲ್ಲೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಪಕ್ಷವನ್ನು ಬಲ ಪಡಿಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಧ್ಯೇಯವಾಗಿದೆ. ಅದಕ್ಕಾಗಿ ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ರಚನಾತ್ಮಕ ಶ್ರೇಣಿಯಲ್ಲಿ ಇನ್ನಷ್ಟು ಬದಲಾವಣೆ ತರುವ ಮೂಲಕ ಜಿಲ್ಲೆಯಲ್ಲಿ ಕಮಲ ಅರಳುವಂತೆ ಮಾಡಲಾಗುವುದು ಎಂದರು.