ಜಿಲ್ಲೆ

ಜಗವೇ ಮೆಚ್ಚಿದೆ ಮೋದಿ ಹೆಜ್ಜೆ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಣ್ಣನೆ

ಬೆಂಗಳೂರು: ಮಹಾಮಾರಿ ಕರೊನಾ ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ದಿಟ್ಟ ನಿರ್ಧಾರಗಳು ಹಾಗೂ ನಿರ್ವಹಣಾ ಕ್ರಮಗಳಿಗೆ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಣ್ಣಿಸಿದ್ದಾರೆ.

ಪ್ರಜ್ಞಾ ಪ್ರವಾಹ ಕರ್ನಾಟಕ ಏರ್ಪಡಿಸಿದ್ದ ‘ಭಾರತದ ಕರೊನಾ ವಿರುದ್ಧದ ಹೋರಾಟ ಮತ್ತು ಮುಂದೆ ಬರುವ ಸವಾಲುಗಳಿಗೆ ಕೇಂದ್ರದ ಸನ್ನದ್ಧತೆ’ ವಿಷಯ ಕುರಿತು ಅಂತರ್ಜಾಲ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಪಕ್ಷದ ದೆಹಲಿ ಕೇಂದ್ರ ಕಚೇರಿಯಿಂದ ಆನ್​ಲೈನ್ ಮೂಲಕ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳ ಪರಿಣಾಮವಾಗಿ ಬೇರೆ ದೇಶಗಳಿಗೆ ಹೋಲಿಸಿದರೆ ಕರೊನಾ ತೀವ್ರವಾಗಿ ಬಾಧಿಸಿಲ್ಲ. ಪ್ರಧಾನಿಯ ಪ್ರತಿ ಕರೆಗೂ ದೇಶದ ಜನತೆ ಅಭೂತಪೂರ್ವವಾಗಿ ಬೆಂಬಲಿಸಿ ಸಂಯಮ ಹಾಗೂ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು.

ನಿರ್ಣಾಯಕ ಹೋರಾಟ: ಲಾಕ್​ಡೌನ್​ನ 45 ದಿನಗಳ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸನ್ನು ದೇಶ ಕಂಡಿದೆ. ಬದುಕು ಕಟ್ಟಿಕೊಳ್ಳಲು ಮುಂದಿನ 6 ತಿಂಗಳು ಎಲ್ಲರೂ ಅತ್ಯಂತ ನಿರ್ಣಾಯಕ ಹೋರಾಟ ಮಾಡಬೇಕಿದೆ. ಸತತ ಹೋರಾಟದ ಫಲದಿಂದ 3 ವರ್ಷಗಳ ತರುವಾಯ ಭಾರತ ವಿಶ್ವಶಕ್ತಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದರು.

ಚೀನಾ ವಿಶ್ವಾಸಾರ್ಹತೆ ಕಳೆದುಕೊಂಡಿರá-ವುದರಿಂದ ಅನೇಕ ರಾಷ್ಟ್ರಗಳು ತಮ್ಮ ಆರ್ಥಿಕ ವಹಿವಾಟು ಮತ್ತು ಉದ್ಯಮಗಳನ್ನು ಚೀನಾದಿಂದ ಸ್ಥಳಾಂತರಿಸಲು ಮುಂದಾಗಿವೆ. ಈ ಅವಕಾಶಗಳ ಸದ್ಬಳಕೆಗೆ ಮೋದಿ ನೇತೃತ್ವದ ಸರ್ಕಾರ ಗಮನ ನೀಡಿದೆ ಎಂದು ತಿಳಿಸಿದರು.