ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜನ್ಮಕ್ಷೇತ್ರ ಶಿವಗಿರಿ ಆಶ್ರಮವನ್ನು ರಾಷ್ಟ್ರದ ಪ್ರಮುಖ ಧಾರ್ಮಿಕ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಠದ ಖಾತೆಗೆ ನೇರವಾಗಿ 150 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಹೇಳಿದರು.
ಭಾನುವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ಭಗವಾನ್ ವಿಶ್ವಕರ್ಮ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಮಹತ್ವದ ಸ್ಥಾನವಿದ್ದು, ಕೆತ್ತನೆಯ ಕೌಶಲ್ಯದಿಂದ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಿಂದುಳಿದ ವರ್ಗಗದ ಆದರ್ಶ ವ್ಯಕ್ತಿಗಳ ವಿಚಾರಗಳನ್ನು ಯುವಜನತೆಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ನಾರಾಯಣ ಗುರುಗಳು ಹಿಂದೂ ಸಮಾಜದಲ್ಲಿ ಬೇರೂರಿದ್ದ ಭೇದ-ಭಾವಗಳನ್ನು ತೊಡೆದು ಹಾಕಿ ಸಮಾಜದ ಏಕತೆಗೆ ಶ್ರಮಿಸಿದ್ದರು. ಗುರುಗಳ ಸಮಾಜ ಸುಧಾರಣೆ ನಮಗೆ ಮಾದರಿಯಾಗಿದೆ. ವಿಶ್ವಕರ್ಮ ಜನಾಂಗದ ಕೊಡುಗೆ ಸ್ಮರಣೀಯವಾಗಿದ್ದು, ಯಾವುದೇ ದೇವಸ್ಥಾನ ಅಥವಾ ಮನೆ ಅವರಿಲ್ಲದೆ ಪರಿಪೂರ್ಣವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಡಾ.ಅಣ್ಣಯ್ಯ ಕುಲಾಲ್, ಇಂದ್ರಾಳಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಕೊರಗ ಸಮುದಾಯದ ಗುರಿಕಾರ ಸುಂದರ ಕೊರಗ ಅವರನ್ನು ಸನ್ಮಾನಿಸಲಾಯಿತು. ಕಟಪಾಡಿ ಆನೆಗುಂದಿ ಸಂಸ್ಥಾನದ ಪವನ್ ಶರ್ಮ ಭಗವಾನ್ ವಿಶ್ವಕರ್ಮರ ಕುರಿತು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಯಾನಂದ ಡಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಉಪನ್ಯಾಸ ನೆರವೇರಿಸಿದರು.
ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಅಶೋಕ್ ಮೂರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಜಿಲ್ಲಾ ಒಬಿಸಿ ಮೋರ್ಚಾದ ಉಸ್ತುವಾರಿ ರೇಷ್ಮಾ ಉದಯ ಶೆಟ್ಟಿ ಭಾಗವಹಿಸಿದ್ದರು. ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್ ಕಡಿಯಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರುಣ್ ಕುಮಾರ್ ಬಾಣ ವಂದಿಸಿದರು.