ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಬಿಜೆಪಿ ಮುಖಂಡರು ಮಂಗಳವಾರ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಶ್ರೀಗಳು ಅಭಿಯಾನದ ಸ್ಟಿಕರ್ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಮಠಕ್ಕೆ ಬರುವ ಬಹುತೇಕ ಭಕ್ತರು ಪ್ರೀತಿ, ಸ್ನೇಹ, ಹಣ್ಣು- ಹಂಪಲು, ಚಿನ್ನ, ಬೆಳ್ಳಿ ಹಾಗೂ ಧನವನ್ನು ನೀಡಿದ್ದಾರೆ. ಈಗ ಮೊದಲ ಬಾರಿಗೆ ರಾಷ್ಟ್ರ ಧ್ವಜ ಕೊಡುತ್ತಿರುವುದು ಎಲ್ಲದಕ್ಕಿಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದು ಶ್ರೀಗಳು ಹೇಳಿದರು.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 67ನೇ ವಾರ್ಡ್ನ ಕಾಪೋ೯ರೇಟರ್ ಶಿವು ಮೆಣಸಿನಕಾಯಿ ನೇತೃತ್ವ ವಹಿಸಿದ್ದರು. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಹು- ಧಾ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮಾಜಿ ಶಾಸಕರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಪ್ರಭು ನವಲಗುಂದಮಠ, ದತ್ತಮೂತಿ೯ ಕುಲಕಣಿ೯ ರಂಗಾ ಬದ್ದಿ, ಶಿವಯ್ಯ ಹಿರೇಮಠ, ಚಂದ್ರಶೇಖರ ಗೋಕಾಕ, ಸಂತೋಷ ಅರಕೇರಿ, ಇತರರು ಇದ್ದರು.