ಜಿಲ್ಲೆ

ಐಟಿ, ಇಡಿ ಅಧಿಕಾರಿಗಳ ರಕ್ಷಣೆಯಲ್ಲಿ ಬಿಜೆಪಿ ಹಣ ಸಾಗಾಟ : ಸಚಿವ ದಿನೇಶ್ ಗುಂಡೂರಾವ್ ಆರೋಪ


ಮೈಸೂರು: ಕೇಂದ್ರ ಸರ್ಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬುಧವಾರ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬೆಂಬಲಿಗರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರ ಮನೆಗೆ ಐಟಿ, ಇಡಿ ದಾಳಿ ಮಾಡಿಸುವ ಬಿಜೆಪಿ ನಾಯಕರು ಮತ್ತೊಂದೆಡೆ ಪೊಲೀಸರು, ಐಟಿ, ಇಡಿ ಅಧಿಕಾರಿಗಳ ರಕ್ಷಣೆಯೊಂದಿಗೆ ಸರ್ಕಾರಿ ವಾಹನದಲ್ಲಿಯೇ ಹಣವನ್ನು ಸಾಗಿಸುತ್ತಿದ್ದಾರೆ. ಕೇವಲ ಪ್ರತಿಪಕ್ಷ ನಾಯಕರ ಮನೆ ಮೇಲೆ ದಾಳಿ ನಡೆಸುವ ಐಟಿ, ಇಡಿ ಬಿಜೆಪಿ ನಾಯಕರ ಮನೆ ಮೇಲೆ ಏತಕ್ಕೆ ದಾಳಿ ನಡೆಸುತ್ತಿಲ್ಲ ಎಂದು ಪ್ರಸ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದಿಂದ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗಿತ್ತಿದ್ದು, ರಾಜ್ಯದ ಪರವಾಗಿ ಧ್ವನಿ ಎತ್ತುವ ಸಂಸದರ ಅವಶ್ಯಕತೆ ಇದೆ. ‘ನಿಮ್ಮ ಪರವಾಗಿ ಮಾತನಾಡುವ ಸಂಸದರ ಅವಶ್ಯಕತೆ ನಿಮಗಿದೆಯೇ ಅಥವಾ ಸಂಸತ್‌ನಲ್ಲಿ ಹೋಗಿ ಸುಮ್ಮನೆ ಕೂರುವ ವ್ಯಕ್ತಿಯ ಅವಶ್ಯಕತೆ ಇದೆಯೇ?’ ಎಂಬುದನ್ನು ನೀವೇ ತೀರ್ಮಾನ ಮಾಡಿ. ಮೈಸೂರು ಸಂಸದ ಪ್ರತಾಪ್ ಸಿಂಹ ಒಂದು ದಿನ ಸಹ ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದೆ ಎಂದು ಪ್ರತಾಪ್ ಸಿಂಹ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು.