ತುಮಕೂರು: ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಗಿದೆ. ಪ್ರತಿಬಾರಿ ಬಜೆಟ್ ಮಂಡನೆ ಮಾಡಿದ ತಕ್ಷಣ ಬೆಲೆ ಏರಿಕೆ ಮಾಡೋ ಚಾಳಿ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಹರಿಹಾಯ್ದರು.
ಜನಾಕ್ರೋಶ ಹಿನ್ನೆಲೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮಿ ಹಣ ಬಾರದೇ ಮೂರು ತಿಂಗಳು ಆಯಿತು. ಸತ್ತವರಿಗೆ ಹಿಡಿ ಮಣ್ಣು ಹಾಕಲೂ ಸರ್ಕಾರದ ಬಳಿ ದುಡ್ಡಿಲ್ಲ. ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿದ್ದಾರೆ. ಈ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಗುಡುಗಿದರು.
ಡಿಕೆಶಿ , ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ ಸಿಎಂ ಆಗಲು ಪೈಪೋಟಿಯಲ್ಲಿ ಇದ್ದಾರೆ.ಈ ಕಾದಾಟದಲ್ಲಿ ರಾಜ್ಯದ ಜನರ ಹಿತ ಮರೆತಿದ್ದಾರೆ ಎಂದರು.
ಬಿಜೆಪಿ ಶಾಸಕರ ಅಮಾನತು ಮಾಡುವ ಹಕ್ಕು ಸ್ಪೀಕರ್ ಗೆ ಇಲ್ಲ. ಒಂದು ದಿನ ಮಾತ್ರ ಸ್ಪೀಕರ್ ಅಮಾನತು ಮಾಡಬಹುದು. ಸ್ಪೀಕರ್ ನಡವಳಿಕೆನೆ ಸರಿ ಇಲ್ಲ. ಅದನ್ನು ನಾನು ಖಂಡಿಸುತ್ತೇನೆ. ಆತನಿಗೆ ಏನಿದೆ ಅಧಿಕಾರ ಅಮಾನತು ಮಾಡಲು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಂರ ಭಿಕ್ಷೆಯಲ್ಲಿ ಬದುಕುತ್ತಿದೆ. ಹಾಗಾಗಿ, ಮುಸ್ಲಿಂರನ್ನು ಸರಿಯಾದ ಟ್ರಾಕ್ ಗೆ ತರಲು ಅವರಿಂದ ಸಾಧ್ಯ ಆಗುತ್ತಿಲ್ಲ. ಕಾನೂನು ಕೈಗೆತ್ತಿಕೊಳ್ಳುವ ಅವರನ್ನು ಹೆಡೆಮುರಿ ಸರ್ಕಾರ ಕಟ್ಟುತ್ತಿಲ್ಲ ಎಂದು ಸುರೇಶ್ ಗೌಡ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಸರ್ಕಾರನೇ ಮುಸ್ಲಿಂ ದುಷ್ಕರ್ಮಿಗಳಿಗೆ ಕುಮ್ಮಕ್ಕು ಕೊಡುತ್ತಿದೆ. ಹಾಗಾಗಿ, ಇಂಥಹ ಘಟನೆಗಳು ನಡೀತಿದೆ ಎಂದರು.