ಜಿಲ್ಲೆ

ಗೂಂಡಾಗಳ ತರಹ ಚಂದ್ರಶೇಖರ್​ ವರ್ತನೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಮಾಜಿ ಸಿಎಂ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವ ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ.ಚಂದ್ರಶೇಖರ್​ ವಿರುದ್ಧ ಕೇಂದ್ರ ಸರ್ಕಾರ ಉಗ್ರ ಕ್ರಮತೆಗೆದುಕೊಳ್ಳಬೇಕು. ತಕ್ಷಣ ಅವರ ಎರವಲು ಸೇವೆ ಮುಕ್ತಾಯಗೊಳಿಸಿ, ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಸಿಬಿಐ ತನಿಖೆ ಆರಂಭಿಸಬೇಕು ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ಆಗ್ರಹಿಸಿದರು.

ನನ್ನ 3 ದಶಕಗಳ ಸಾರ್ವಜನಿಕ ಜೀವನದಲ್ಲಿ ಒಬ್ಬ ಅಧಿಕಾರಿ ಈ ರೀತಿ ಶಾಸಕಾಂಗದ ಗಣ್ಯರೊಬ್ಬರ ವಿರುದ್ಧ ಮಾತನಾಡಿರುವುದು ನೋಡಿಲ್ಲ. ಇಂತಹ ಉದ್ಧಟತನವನ್ನು ಸಹಿಸಿಕೊಂಡು ಇರಲು ಆಗುವುದಿಲ್ಲ. ಅಧಿಕಾರಿಗಳಾದವರು ಅಧಿಕಾರಿಗಳಂತೆ ವರ್ತಿಸಬೇಕು, ಗೂಂಡಾಗಳ ತರಹ ಅಲ್ಲ. ಈ ಸರ್ಕಾರದಲ್ಲಿ ಯಾವ ಮಾನ ಮರ್ಯಾದೆ ಉಳಿದಿಲ್ಲ ಎನ್ನುವುದಕ್ಕೆ ಚಂದ್ರಶೇಖರ್​ ಆಡಿರುವ ಮಾತು ನಿದರ್ಶನವಾಗಿದೆ. ರಾಜಭವನದ ವಿರುದ್ಧವೇ ತನಿಖೆಗೆ ಮುಂದಾಗುವಂತ ದುರಹಂಕಾರ ಈ ಅಧಿಕಾರಿಗೆ ಎಲ್ಲಿಂದ ಬಂತು ಎಂದು ತೀಕ್ಷ$್ಣವಾಗಿ ಪ್ರಶ್ನಿಸಿದ್ದಾರೆ.

ಒಬ್ಬ ಮಾಜಿ ಸಿಎಂ, ಕೇಂದ್ರ ಸಚಿವರ ವಿರುದ್ಧವೇ ಇಂತಹ ಭಾಷೆ ಬಳಸುವುದಾದರೆ ಇನ್ನು ನಮ್ಮಂತವರ ಗತಿಯೇನು? ಕುಮಾರಸ್ವಾಮಿ ಅವರ ಬಗ್ಗೆ ಹಂದಿ ಎನ್ನುವ ಪದ ಬಳಸಿರುವ ಈ ಅಧಿಕಾರಿಯೇ ಹಂದಿಗೆ ಸಮಾನವಾಗಿದ್ದಾರೆ. ಅವರು ತಮ್ಮ ವಿರುದ್ಧ ಬಂದ ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ್​ ಅವರು ಸರ್ಕಾರಕ್ಕೆ ಕೋರಿಕೊಳ್ಳಬೇಕು. ಇಲ್ಲವಾದರೆ ಇಂತಹ ಪರಮಭ್ರಷ್ಟ ಅಧಿಕಾರಿಯನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಂಸ್ಥೆ ಹೋರಾಟ ಮಾಡುವುದು ಒಂದು ನಾಟಕದಂತೆ ಜನರಿಗೆ ಅನಿಸುತ್ತದೆ ಎಂದು ಪ್ರಕಟಣೆಯಲ್ಲಿ ಹರಿಹಾಯ್ದರು.