ಜಿಲ್ಲೆ

ಬಿಜೆಪಿ ಶಾಸಕರಿಂದ ಡಿ.ಸಿ. ಕಚೇರಿಯಲ್ಲಿ ಪ್ರತಿಭಟನೆ

Mangaluru - Hariprasad Rai

ಬಿಜೆಪಿ ಶಾಸಕರಿಂದ ಡಿ.ಸಿ. ಕಚೇರಿಯಲ್ಲಿ ಪ್ರತಿಭಟನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿಯಾಗುತ್ತಿರುವುದನ್ನು ಖಂಡಿಸಿ ಬಿಜೆಪಿ ಶಾಸಕರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಬಾಗಿಲಿನ ಬಳಿ ಪ್ರತಿಭಟನೆ ನಡೆಸಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ‘ ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದೆಯೋ ಎಂದು ತಿಳಿಯುತ್ತಿಲ್ಲ. ಶಾಸಕ ತನ್ನ ಕ್ಷೇತ್ರದ ಪಂಚಾಯತ್ ಕಚೇರಿಗೆ ಹೋಗುವ ವೇಳೆ ಪೊಲೀಸರಿಂದ ತಡೆಯುವ ಪ್ರಯತ್ನ ನಡೆಸಲಾಗುತ್ತದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ವೇಳೆ ಗೂಂಡಾಗಿರಿ ನಡೆಸಲಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಸಲ್ಲಿಸುವ ಬೇಡಿಕೆಯ ಆಧಾರದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಶಿಷ್ಠಾಚಾರ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಅಮಾನತುಗೊಂಡ ಅಧಿಕಾರಿಗಳ ಅಮಾನತು ಆದೇಶ ತಕ್ಷಣ ವಾಪಸ್ ಪಡೆಯಬೇಕು.ಮುಂದೆ ಶಾಸಕರ ಹಕ್ಕುಚ್ಯುತಿ ಆಗದಂತೆ ನೋಡಿಕೊಳ್ಳಬೇಕು. ಇರುವೈಲು ಗ್ರಾಪಂ ಕಟ್ಟಡ ಇಂದಿನಿಂದಲೇ ಕಾರ್ಯಾರಂಭ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಎಂಎಲ್‌ಸಿ ವಿಧಾನ ಪರಿಷತ್ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಾಸಕರ ಕರ್ತವ್ಯ, ಜವಾಬ್ದಾರಿ ಬಗ್ಗೆ ತರಬೇತಿ ನೀಡಿದ ಸರ್ಕಾರ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಮಾಡುತ್ತಿದೆ. ಅಧಿಕಾರಿಗಳು ಪ್ರತಿಪಕ್ಷದ ಶಾಸಕರ ಮಾತು ಕೇಳಬಾರದು ಎಂಬ ವಾತಾವರಣ ಸೃಷ್ಟಿಸಲಾಗಿದೆ. ರಾಜ್ಯದ ಇತಿಹಾಸಲ್ಲಿ ಶಾಸಕರು ಡಿಸಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ ಎಂದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆಗಮಿಸಿದಾಗ ಜಿಲ್ಲಾಡಳಿತದ ನಡೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಅಮಾನತು ಮಾಡಲು ಕಾರಣ ಏನೆಂದು ಪ್ರಶ್ನಿಸಿದ
ಐಎಎಸ್ ಅಧಿಕಾರಿಯಾಗಿ ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಇರುವೈಲು ಗ್ರಾಪಣ ಕಟ್ಟಡ ಉದ್ಘಾಟನೆ ಸಂಬಂಧಿಸಿ ಅಮಾನತುಗೊಂಡಿರುವ ಪಿಡಿಒ ಹಾಗೂ ಇಒ ಅವರನ್ನು ಮರು ನೇಮಕಕ್ಕೆ ಈಗಾಗಲೇ ಸರ್ಕಾರ ಕ್ರಮ ವಹಿಸಿದೆ. ಆದೇಶ ಪತ್ರ ಸೋಮವಾರ ಶೀಘ್ರ ಕೈ ಸೇರುವ ಸಾಧ್ಯತೆ ಇದೆ .ಗ್ರಾಪಂ ಕಚೇರಿ ಕಾರ್ಯಾರಂಭಕ್ಕೆ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು,
ಜಿಲ್ಲಾಧಿಕಾರಿ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗುತ್ತಿದೆ. ಬೇಡಿಕೆ ಈಡೇರದಿದ್ದರೆ ಮಂಗಳವಾರದಿಂದ ಮತ್ತೆ
ಪ್ರತಿಭಟನೆ ಮುಂದುವರಿಸುವುದಾಗಿ ದ.ಕ.ಸಂಸದರು ತಿಳಿಸಿದರು.
ಶಾಸಕರಾದ ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್ , ಭಾಗೀರಥಿ ಮುರುಳ್ಯ, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ , ಸುಧೀರ್ ಶೆಟ್ಟಿ ಕಣ್ಣೂರು ಮುಂತಾದವರು
ಭಾಗವಹಿಸಿದ್ದರು.


----------------