ಮಂಡ್ಯ: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಇತ್ತ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯೂ ಆದ ಮುಖಂಡ ಇಂಡುವಾಳು ಸಚ್ಚಿದಾನಂದ ಟೀಕಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ್ತು ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಜಾರಿಗೆ ರಾಜ್ಯಸರ್ಕಾರದ ಬಳಿ ಅನುದಾನವಿಲ್ಲ. ಪರಿಣಾಮ ಗ್ಯಾರಂಟಿ ಯೋಜನೆಗಳಾದರೂ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ಮಹಿಳೆಯರಿಗೆ ಪ್ರತಿ ತಿಂಗಳು ಸರಿಯಾಗಿ ಗೃಹಲಕ್ಷ್ಮೀ ಯೋಜನೆ ಹಣ ಹೋಗುತ್ತಿಲ್ಲ. ಅನ್ನಭಾಗ್ಯ ಯೋಜನೆಯ ಅಕ್ಕಿ ಮೊತ್ತವೂ ಕೂಡ ಜನರ ಕೈ ಸೇರುತ್ತಿಲ್ಲ. ನೀರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ಕೊಡುವ ಕೆಲಸವಾಗುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ಸರ್ಕಾರದಲ್ಲಿ ಹಣವಿಲ್ಲದೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಅಭಿವೃದ್ಧಿ ಕಾಮಗಾರಿ ಹಾಗೂ ಶಾಸಕರಿಗೂ ಅನುದಾನವನ್ನು ನೀಡುತ್ತಿಲ್ಲ. ಇದರಿಂದ ಶಾಸಕರ ಕೈಕಟ್ಟಿ ಹಾಕಿದಂತ ಸ್ಥಿತಿಯಲ್ಲಿದ್ದಾರೆ. ಮಂಡ್ಯದಲ್ಲಿ ಮೈಷುಗರ್ ಹೊಸ ಕಾರ್ಖಾನೆ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಈ ವಿಚಾರದಲ್ಲಿ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ. ಹೊಸ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದ ಎಥೆನಾಲ್ ಘಟಕವು ಕೂಡ ಈವರೆಗೆ ಆರಂಭವಾಗಿಲ್ಲ ಎಂದು ಕಿಡಿಕಾರಿದರು.
ಜನರಿಗೆ ಕನಿಷ್ಟ ಮೂಲಸೌಕರ್ಯಗಳು ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಹಾಗೂ ಶಾಸಕರಿಂದ ಸಾಧ್ಯವಾಗುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಜನರು ಸಂಚರಿಸುವುದು ದುಸ್ತರವಾಗಿದೆ. ಈ ಬಗ್ಗೆ ನಿರಂತರವಾಗಿ ಜನರು ಆಕ್ರೋಶ ಹೊರಹಾಕುತ್ತಿದ್ದರೂ, ಶಾಸಕರು ಗಮನಹರಿಸುತ್ತಿಲ್ಲ. ಇನ್ನಾದರೂ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆದ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೇವಿನಹಳ್ಳಿ ಮಹೇಶ, ಶ್ರೀರಂಗಪಟ್ಟಣ ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸತೀಶ್, ಕೊತ್ತತ್ತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್, ಉಪಾಧ್ಯಕ್ಷ ಯೋಗೇಶ್, ಮುಖಂಡರಾದ ಸುಕೇಂದ್ರ, ಜವರೇಗೌಡ, ಉದ್ಯಮಿ ಮಹೇಶ, ಶಂಕರೇಗೌಡ, ಮಾಯಿಗೌಡ, ಚೇತನ್ ಇತರರಿದ್ದರು.