ಜಿಲ್ಲೆ

ರೈತರಿಗೆ ಅನ್ಯಾಯ ಮಾಡಿದರೆ ಸಹಿಸಲಾಗಲ್ಲ: ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಎಚ್ಚರಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಷುಗರ್ ಕಾರ್ಖಾನೆ ವ್ಯಾಪ್ತಿಗೆ ಸೇರಿದ ಕಬ್ಬನ್ನು ಕಟಾವು ಮಾಡುವ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಈ ರೀತಿ ರೈತರಿಗೆ ಅನ್ಯಾಯ ಮಾಡಿದರೆ ಸಹಿಸಲಾಗುವುದಿಲ್ಲ ಎಂದು ಬಿಜೆಪಿ ಮುಖಂಡರೂ ಆದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಎಚ್ಚರಿಕೆ ನೀಡಿದರು.

ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ವೇಳೆ ಕಬ್ಬು ಕಟಾವು ವಿಚಾರದ ಬಗ್ಗೆ ರೈತರು ಅಳಲು ತೋಡಿಕೊಂಡರು. ಮೈಷುಗರ್ ಕಾರ್ಖಾನೆ ವ್ಯಾಪ್ತಿಗೆ 46 ಹಳ್ಳಿ ಸೇರುತ್ತದೆ. ಆದರೆ, ಎಲ್ಲಿಯೂ ಸಮರ್ಪವಾಗಿ ಕಬ್ಬು ಕಟಾವು ಮಾಡುತ್ತಿಲ್ಲ. ಮುಖ್ಯವಾಗಿ ಈ ವಿಚಾರದಲ್ಲೂ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವವರ ಕಬ್ಬನ್ನು ಮಾತ್ರ ಪ್ರಥಮ ಅದ್ಯತೆಯಲ್ಲಿ ಕಟಾವು ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿರುವ ರೈತರ ಕಬ್ಬು ಕಟಾವಿಗೆ ವಿಳಂಬ ಮಾಡಲಾಗುತ್ತಿದೆ. ಪರಿಣಾಮ ಕಬ್ಬಿನ ಕಟಾವು ಅವಧಿ ಮುಗಿಯುತ್ತಿದ್ದು, ನಷ್ಟದ ಭೀತಿ ಎದುರಾಗಿದೆ. ಈ ಬಗ್ಗೆ ಕೇಳಿದರೂ ಸ್ಪಂದನೆ ಸಿಗುತ್ತಿಲ್ಲ. ಏನು ಮಾಡುವುದೆಂದು ತಿಳಿಯದಾಗಿದೆ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚ್ಚಿದಾನಂದ, ಈ ವಿಚಾರವಾಗಿ ಕಾರ್ಖಾನೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸಮರ್ಪಕವಾಗಿ ಕಬ್ಬು ಕಟಾವಿಗೆ ಕ್ರಮ ವಹಿಸಲಾಗುವುದು. ರೈತರಿಗೆ ಯಾವುದೇ ಪಕ್ಷವಿಲ್ಲ. ಅವರ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಎಲ್ಲ ರೈತರನ್ನು ಸಮಾನವಾಗಿ ಪರಿಗಣಿಸಿ, ಕಬ್ಬಿನ ಅವಧಿ ಆಧರಿಸಿ ಕಟಾವು ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

75 ಸಾವಿರ ಸದಸ್ಯತ್ವ ಗುರಿ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 75 ಸಾವಿರ ಜನರ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ಕ್ಷೇತ್ರದಲ್ಲಿ ಈವರೆಗೆ 6000ಕ್ಕೂ ಹೆಚ್ಚು ಜನರನ್ನು ನೋಂದಾಯಿಸಲಾಗಿದೆ. ನಿರಂತರ ಕಾರ್ಯಕ್ರಮದ ಮೂಲಕ ಕಾಲಮಿತಿಯೊಳಗೆ ಗುರಿ ತಲುಪಲಾಗುವುದು. ಜಿಲ್ಲೆಯಲ್ಲಿ ಬಿಜೆಪಿ ತನ್ನದೇ ಆಸ್ತಿತ್ವ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಬಿಜೆಪಿ ಪ್ರಾಬಲ್ಯ ಹೆಚ್ಚಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ ನಿರ್ಮಾಣ ಕಾರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇದರಿಂದ ಜನರ ಬದುಕು ಸುಧಾರಿಸುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಬೇಲೂರು ಮಾಯಿಗಯ್ಯ, ಯತ್ತಗದಹಳ್ಳಿ ಸಂಜು, ಕಬ್ಬನಹಳ್ಳಿ ರಾಮಚಂದ್ರು, ಹನಿಯಂಬಾಡಿ ಸತೀಶ್, ಮಂಗಲ ರಮೇಶ್, ಹಳುವಾಳು ಪ್ರಮೋದ್, ತಗ್ಗಹಳ್ಳಿ ಗ್ರಾಮದ ಮುಖಂಡರಾದ ಕಾಳೇಗೌಡ, ಜವರೇಗೌಡ, ರಕ್ಷಿತ್, ಪ್ರಸನ್ನ, ಸಿದ್ದೇಗೌಡ, ಮೋನಿಷ್ ಇತರರಿದ್ದರು. ತಗ್ಗಹಳ್ಳಿ ಗ್ರಾಮವೊಂದರಲ್ಲಿಯೇ 100ಕ್ಕೂ ಹೆಚ್ಚು ಜನರ ಬಿಜೆಪಿ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿಕೊಂಡರು.