ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸೋಲಿನಿಂದ ನಾನು ವಿಚಲಿತನಾಗಿಲ್ಲ, ಆದರೆ ನನ್ನನ್ನು ಹಾಗೂ ಪಕ್ಷವನ್ನು ನಂಬಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರ ಬಗ್ಗೆ ಯೋಚನೆ ಮಾಡಿದರೆ ಬೇಸರವಾಗುತ್ತದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ನಗರದ ಕನಕ ಭವನದಲ್ಲಿ ಶನಿವಾರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರದ ಕೆಲ ಬದಲಾವಣೆ ಹಾಗೂ ಪ್ರತಿ ಪಕ್ಷಗಳ ಅಪಪ್ರಚಾರದ ಜತೆಗೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ೋಷಣೆಯಿಂದ ತಾಲೂಕಿನಲ್ಲಿ 10 ಸಾವಿರ ಮತ ಕೈತಪ್ಪುವಂತಾಯಿತು. ಬಿಜೆಪಿಯ ಒಳಮೀಸಲಾತಿ ಜಾರಿ ವಿಚಾರ ಹಾಗೂ ಪ್ರತಿ ಪಕ್ಷಗಳ ಶೇ.40 ಕಮಿಷನ್ ಅಪಪ್ರಚಾರವೂ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು ಎಂದರು.
ಮುಖಂಡರು ಕೈ ಕೊಟ್ಟರು: ತಾಲೂಕಿನ ಕೆಲವು ಮುಖಂಡರು ನನಗೆ ಕೈಕೊಟ್ಟರು. ನನ್ನ ಪರ ಇದ್ದು ಮತದಾರರ ದಿಕ್ಕುತಪ್ಪಿಸಿದರು ಎಂದು ಬೇಸರ ವ್ಯಕ್ತಪಡಿಸಿದರು. ನಾನು ತಾಲೂಕಿನಲ್ಲಿ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಧರ್ಮ, ಸಮುದಾಯ ಎಂದು ಸೀಮಿತವಾಗದೆ ಎಲ್ಲ ವರ್ಗದವರಿಗಾಗಿ ಕೆಲಸ ಮಾಡಿದೆ, ಆದರೆ ಚುನಾವಣೆ ವೇಳೆ ಮುಸ್ಲಿಂ ಸಮುದಾಯವರು ವ್ಯಕ್ತಿತ್ವವನ್ನು ಕಡೆಗಣಿಸಿ ಕಾಂಗ್ರೆಸ್ ಕಡೆ ಮುಖ ಮಾಡಿದರು ಎಂದರು. ಕೋವಿಡ್ ಸಂದರ್ಭದಲ್ಲಿ ಜೀವಭಯ ಬಿಟ್ಟು ಗ್ರಾಮಗಳಿಗೆ ಭೇಟಿ ನೀಡಿ ಮಾಸ್ಕ್, ಸ್ಯಾನಿಟೈಸರ್, ಔಷಧ ಸೇರಿ ಆಹಾರ ವ್ಯವಸ್ಥೆ ಮಾಡಿದೆ. ಅದನ್ನು ಮತದಾರರು ನೆನಪಿಸಿಕೊಳ್ಳಲಿಲ್ಲ ಎಂದು ಬೇಸರಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಂ ಸಮುದಾಯವರನ್ನು ಪಾಕಿಸ್ತಾನಕ್ಕೆ ಓಡಿಸುತ್ತಾರೆ, ಪಡಿತರ ನಿಲ್ಲಿಸುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿ ಮತದಾರರ ದಿಕ್ಕುತಪ್ಪಿಸಿದರು ಎಂದು ಕಿಡಿಕಾರಿದರು. 10 ಕೆಜಿ ಅಕ್ಕಿಯಲ್ಲಿ ಕೇಂದ್ರದ ಪಾಲು ಶೇ.50 ಇದೆ, ಉಳಿದ 5 ಕೆಜಿ ರಾಜ್ಯ ಸರ್ಕಾರದಿಂದ ಕೊಡಲಾಗುತ್ತದೆ. ಕೇಂದ್ರ ಸರ್ಕಾರ ಏನಾದರೂ ಅಕ್ಕಿ ಸರಬರಾಜು ನಿಲ್ಲಿಸಿದರೆ, ಕೇವಲ 6 ತಿಂಗಳಲ್ಲಿ ರಾಜ್ಯದ ಜನರಿಗೆ ಪಡಿತರ ನೀಡಲು ರಾಜ್ಯ ಸರ್ಕಾರಕ್ಕೆ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಸಾಂಪ್ರದಾಯಿಕ ಮತಗಳಿಗೂ ಕೊಕ್ಕೆ: ಕಾಂಗ್ರೆಸ್ ಗೆದ್ದರೆ ನಮ್ಮದೇ ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಕುರುಬ ಸಮುದಾಯದ ಸುಮಾರು 6 ಸಾವಿರ ಮತದಾರರು ಕಾಂಗ್ರೆಸ್‌ಗೆ ಮತಹಾಕಿದ್ದೂ ತಾಲೂಕಿನಲ್ಲಿ ನನ್ನ ಸೋಲಿಗೆ ಪ್ರಮುಖ ಕಾರಣವಾಯಿತು. ತಾಲೂಕಿನಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳು, ನೆರವು-ಸಹಕಾರ ಮರೆತ ಸಮುದಾಯದ ಕೆಲವು ಮುಖಂಡರು ಸಿದ್ದರಾಮಯ್ಯ ಹೆಸರು ಹೇಳಿ ಸಾಂಪ್ರದಾಯಿಕ ಮತಗಳನ್ನೂ ಛಿದ್ರ ಮಾಡಿದರು. ಇವು ತಾಲೂಕಿನಲ್ಲಿ ಕಡಿಮೆ ಅಂತರದ ಪರಾಭವಕ್ಕೆ ಪ್ರಮುಖ ಕಾರಣಗಳಲ್ಲೊಂದು ಎಂದು ಎಂಟಿಬಿ ಹೇಳಿದರು.