ಗೋಣಿಕೊಪ್ಪ: ಮುಂಬರುವ ಲೋಕಸಭಾ ಚುನಾವಣೆ ನಮ್ಮ ಮುಂದೆ ಇರುವ ದೊಡ್ಡ ಸವಾಲು. ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಂಸದ ಪ್ರತಾಪ್‌ಸಿಂಹ ಕರೆ ನೀಡಿದರು.
ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ಸಭಾಂಗಣದಲ್ಲಿ ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನೂತನವಾಗಿ ವಿವಿಧ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದವರನ್ನು ಸನ್ಮಾನಿಸಿ ಮಾತನಾಡಿದರು.
ಜಿಲ್ಲೆಯ 30 ಸಹಕಾರ ಸಂಘಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ನಿರ್ದೇಶಕರಾಗಿದ್ದಾರೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಗಟ್ಟಿಯಾಗಿದೆ. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿರುವುದನ್ನು ನಾವು ಕಹಿ ಘಟನೆ ಎಂದು ಮರೆಯೋಣ. ಸೋಲಿಗೆ ಕಾರಣಗಳೇನು ಎಂಬುದು ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಹೀಗಾಗಿ ಮುಂದೆ ಸೋಲು ಕಾಣುವ ಅವಕಾಶವೇ ಎದುರಾಗಬಾರದು. ಲೋಕಸಭೆಯಲ್ಲಿ ಗೆಲುವು ಸಾಧಿಸಿ ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂದು ಸಾಬೀತು ಮಾಡಬೇಕು. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿ ಪಾಲಿಸಬೇಕು ಎಂದರು.
ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ವಿಚಾರಗಳು ಈಗಾಗಲೇ ತಿಳಿದು ಬಂದಿದೆ. ಪಕ್ಷದ ನಾಯಕರು ಕಾರ್ಯಕರ್ತರೊಂದಿಗೆ ಸದಾ ಒಡನಾಟದಲ್ಲಿದ್ದಾರೆ. ಯಾವುದಕ್ಕೂ ಧೃತಿಗೆಡುವ ಅವಶ್ಯಕತೆ ಇಲ್ಲ. ಸಮಸ್ಯೆ ಎದುರಾದಾಗ ಯಾವುದೇ ಸಂದರ್ಭದಲ್ಲಿ ಪಕ್ಷದ ನಾಯಕರನ್ನು ಸಂಪರ್ಕಿಸಬೇಕು. ಅಗತ್ಯವಿದ್ದಲ್ಲಿ ಹೋರಾಟಕ್ಕೆ ಧುಮುಕಬೇಕು. ಈಗಾಗಲೇ ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ವಿವರ ನೀಡಿದ್ದೇನೆ. ಯಾರೂ ಭಯಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಕೇವಲ ಸುಳ್ಳಿನ ಸರಮಾಲೆಯನ್ನೇ ಜನರ ಮುಂದಿಟ್ಟು ಗೆಲುವು ಸಾಧಿಸಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೇಂದ್ರ ಸರ್ಕಾರ ಜನತೆಗೆ ನೀಡಿರುವ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡಬೇಕು. ಸರ್ಕಾರ ಬಂದು ಆರು ತಿಂಗಳು ಕಳೆದರೂ ಕೊಡಗಿನ ಅಭಿವೃದ್ಧಿಗೆ ಯಾವುದೇ ಅನುದಾನ ಮಂಜೂರಾಗಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಶಾಸಕರು ನಡೆಸುತ್ತಿರುವ ಭೂಮಿಪೂಜೆ ಕಾರ್ಯಕ್ರಮವು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಮಂಜೂರಾಗಿರುವ ಅನುದಾನವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಬಿಡಿಗಾಸನ್ನು ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲೆಯಲ್ಲಿ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಜಯಗಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ವ್ಯಾಪ್ತಿಯ ಮತದಾರರನ್ನು ಗೌರವದಿಂದ ಕಾಣುತ್ತಿರುವುದೇ ಈ ಗೆಲುವಿಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ಯೋಜನೆಯನ್ನು ರಾಜ್ಯ ಸರ್ಕಾರ ಯೋಜನೆ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ಇದನ್ನು ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಬೇಕು. ಯಾವುದೇ ಕಾರ್ಯಕರ್ತರು ಭಯಪಡುವ ಅವಶ್ಯಕತೆಯಿಲ್ಲ. ಕಾರ್ಯಕರ್ತರ ಪರವಾಗಿ ನಾವಿದ್ದೇವೆ ಎಂದರು.
ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್ ಮಾತನಾಡಿದರು. ಪೊನ್ನಂಪೇಟೆಯ ಎಪಿಸಿಎಂಎಸ್ ಸಹಕಾರ ಸಂಘಕ್ಕೆ ಆಯ್ಕೆಯಾದ ಬಿಜೆಪಿಯ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಮುಖಂಡರಾದ ಮಾಚಿಮಾಡ ರವೀಂದ್ರ, ಗುಮ್ಮಟ್ಟೀರ ಕಿಲನ್ ಗಣಪತಿ ಇತರರು ಪಾಲ್ಗೊಂಡಿದ್ದರು.