DR.G.PARAMESHWAR 
ಜಿಲ್ಲೆ

ರಾಜಕೀಯ ಕಾರಣಕ್ಕಾಗಿ ಬಿಜೆಪಿ ಪಾದಯಾತ್ರೆ

ಮರಿದೇವ ಹೂಗಾರ

ಹುಬ್ಬಳ್ಳಿ: ತಾವು ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ ಪಾದಯಾತ್ರೆಯಿಂದ ಜೆಡಿಎಸ್ ಹೊರಗಡೆ ಹೋಗುತ್ತಿದೆ. ಬಿಜೆಪಿಯಲ್ಲೂ ಒಗ್ಗಟ್ಟಿಲ್ಲ. 14 ತಿಂಗಳು ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದಾಗಲೂ ಬಿಟ್ಟು ಹೋದರು. ಇದು ನಿರೀಕ್ಷಿತ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಹಿಂದಿನ ದಿನಗಳನ್ನು ಮೆಲಕು ಹಾಕಿ ಟಾಂಗ್ ಕೊಟ್ಟರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಕುರಿತು ಬಿಜೆಪಿಯವರು ಪಾದಯಾತ್ರೆ ಏಕೆ ಮಾಡುತ್ತಿದ್ದಾರೆಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಈ ಪ್ರಕರಣದ ಕುರಿತು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿಗೆ ವಿವರಣೆ ಕೊಡುವುದಿಲ್ಲ. ತನಿಖೆಯಿಂದ ಇದರಲ್ಲಿ ಯಾರಾರು ಸೈಟ್ ತೆಗೆದುಕೊಂಡಿದ್ದಾರೆ ಎಂಬುದು ಹೊರಗಡೆ ಬರಲಿದೆ ಎಂದರು.
ಬಿಜೆಪಿಯಲ್ಲಿ ಗುಂಪು ಆಗಿದೆ. ಜೆಡಿಎಸ್ ಪಾದಯಾತ್ರೆಗೆ ಸಹಕಾರ ಕೊಡುತ್ತಿಲ್ಲವೆಂದರೆ ನೀವೇ(ಮಾಧ್ಯಮದವರು) ಊಹೆ ಮಾಡಿ. ಸೈಟ್ ಹಂಚಿಕೆಯಲ್ಲಿ ಕಾನೂನು ಬಾಹಿರವಾಗಿ ಏನು ನಡೆದಿದೆ ಎಂಬುದು ಬಿಜೆಪಿಯವರಿಗೆ ಗೊತ್ತಿದೆ. ನಮ್ಮ ಇಲಾಖೆಯಿಂದ ಪಾದಯಾತ್ರೆಗೆ ಪರವಾನಗಿ ಕೊಡಲು ಬರುವುದಿಲ್ಲ. ಪಾದಯಾತ್ರೆ ಮಾಡುವುದು ಬಿಜೆಪಿಯವರ ಹಕ್ಕು. ರಾಜಕೀಯ ಕಾರಣಕ್ಕಾಗಿ ಮಾಡುತ್ತಿದ್ದಾರೆ. ಪಾದಯಾತ್ರೆ ವೇಳೆ ಶಾಂತಿಗೆ ಭಂಗ ತರುವುದು ಹಾಗೂ ಕಾನೂನು ಬಾಹಿರವಾಗಿ ನಡೆದುಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯವರು ನಮಗಿಂತ ಮುಂಚೆ ನೆರೆಪೀಡಿತ ಪ್ರದೇಶಕ್ಕೆ ಹೋಗಿಲ್ಲ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಭೇಟಿ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರವಾಸ ಮಾಡುತ್ತಿದ್ದಾರೆ. ಇದನ್ನು ನೋಡಿ ಬಿಜೆಪಿಯವರಿಗೆ ಈಗ ತಲೆಯಲ್ಲಿ ಬಂದಿದೆ ಎಂದು ದೂರಿದರು.
ಸಹಜ ಪ್ರಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ದೆಹಲಿಗೆ ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಆಡಳಿತ ಪಕ್ಷವಾಗಿರುವುದರಿಂದ ಹೈಕಮಾಂಡ್ ಬಳಿ ಹೋಗಿದ್ದಾರೆ. ಅವರ ಸಲಹೆ-ಸೂಚನೆ ಪಡೆಯಲಿದ್ದಾರೆ. ಇದೇ ಸಂದರ್ಭದಲ್ಲಿ ಹೋಗಿರುವುದರಿಂದ ಗಮನ ಸೆಳೆಯುತ್ತಿದೆ ಅಷ್ಟೇ. ನಾರ್ಮಲ್ ಕೋರ್ಸ್‌ನಲ್ಲಿ ಹೈಕಮಾಂಡ್‌ನವರು ಕರೆದಿದ್ದಾರೆ ಎಂದರು.
ಕೇರಳದ ವಯಾನಾಡಿನಲ್ಲಾಗಿರುವ ಭೂಕುಸಿತ ಘಟನೆ ನೋವು ತರಿಸಿದೆ. ಇದು ದುಃಖದ ಸಂಗತಿ. ಸಂತಾಪ ವ್ಯಕ್ತಪಡಿಸುವೆ. ಮೃತ ಕುಟುಂಬದವರಿಗೆ ಸಹಾಯ ಮಾಡುತ್ತೇವೆ. ರಾಜ್ಯದಿಂದಲೂ ನೆರವಿನ ಹಸ್ತ ಚಾಚುತ್ತೇವೆ ಎಂದರು.
ಪಿಎಸ್‌ಐ ನೇಮಕ ಪ್ರಕ್ರಿಯೆ ವಿಳಂಬ ಆಗಿದೆ. ಕೋರ್ಟ್‌ನಲ್ಲಿದ್ದ ಪ್ರಕರಣವನ್ನು ಬಗೆಹರಿಸಿ ಮರು ಪರೀಕ್ಷೆ ನಡೆಸಿದ್ದೇವೆ. ಒಂದೆರಡು ತಾಂತ್ರಿಕ ಸಮಸ್ಯೆ ಇದೆ. ಕಲ್ಯಾಣ ಕರ್ನಾಟಕದ ಮೀಸಲಾತಿಗೆ ಸಂಬಂಧಿಸಿದಂತೆ ಗೊಂದಲಗಳಿವೆ. ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಸಭೆ ಮಾಡಿ ಚರ್ಚಿಸಿದ್ದೇವೆ. ಶೀಘ್ರವೇ ಬಗೆಹರಿಸಲಾಗುವುದು ಎಂದರು.
ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದವರಿಗೆ ಆಶ್ರಯ ಮನೆ ಕೊಡುವುದಾಗಿ ಹೇಳಿದ್ದೇವೆ. ಬೇರೆ ಕಾರ್ಯಕ್ರಮದಡಿ ಧನಸಹಾಯ ಮಾಡಲಾಗುವುದು. ಕೊಲೆ ಪ್ರಕರಣದಲ್ಲಿ ಪರಿಹಾರ ಕೊಡಲು ಬರುವುದಿಲ್ಲ. ಈ ಪ್ರಕರಣ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದರು.
ಮುಂದಿನ ಮುಖ್ಯಮಂತ್ರಿ ಪರಮೇಶ್ವರ !
ಬೀಳಗಿಯಲ್ಲಿ ನಿರ್ಮಾಣವಾಗಿರುವ ಮೆಡಿಕಲ್ ಕಾಲೇಜ್ ಉದ್ಘಾಟನೆಗೆ ತೆರಳುವ ಮುನ್ನ ಹುಬ್ಬಳ್ಳಿಗೆ ಆಗಮಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಗೆ ಮುಂದಿನ ಮುಖ್ಯಮಂತ್ರಿ ಪರಮೇಶ್ವರ ಎಂಬ ಘೋಷಣೆಯ ಸ್ವಾಗತ ಸಿಕ್ಕಿತು. ಪರಮೇಶ್ವರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ ವಾಹನ ಹತ್ತಲು ಅಣಿಯಾದರು. ಈ ವೇಳೆ ಬಹಳಷ್ಟು ಸೇರಿದ್ದ ಕಾರ್ಯಕರ್ತರು, ಮುಂದಿನ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಎಂದು ಘೋಷಣೆ ಮೊಳಗಿಸಿದರು. ರಾಜ್ಯ ಸರ್ಕಾರದ ಪರ ಜೈಕಾರ ಹಾಕಿದರು.