ಶಿವಮೊಗ್ಗ: ಅಂಬೇಡ್ಕರ್ ಜಯಂತಿ ದಿನದಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಎಲ್ಲ ವರ್ಗದವರನ್ನೂ ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಇದಕ್ಕಾಗಿ ದೇಶದ ಅನೇಕ ಹಿರಿಯರು ಮತ್ತು ತಜ್ಞರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ 10 ವರ್ಷಗಳಲ್ಲಿ ಏನು ಮಾಡಬೇಕು ಎಂಬ ಕುರಿತು ನಮೋ ಆಪ್ ಮೂಲಕ 40 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಸಲಹೆಗಳನ್ನು ನೀಡಿದ್ದರು. ಅದನ್ನು ಗಮನಿಸಿ ಪಕ್ಷದಿಂದ ಉತ್ತಮ ಪ್ರಣಾಳಿಕೆ ಬಿಡುಗಡೆಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯೂ ಸಂತೋಷದಿಂದ ಜೀವನ ನಡೆಸಲು ಬೇಕಾದ ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗಿದೆ. ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ಭಾರತ ವಿಶ್ವದಲ್ಲೇ ಸೂಪರ್ ಪವರ್ ಆಗಲು ಯೋಜನೆ ರೂಪಿಸಲಾಗಿದೆ. ಇಡೀ ವಿಶ್ವವೇ ಭಾರತದ 18ನೇ ಲೋಕಸಭೆ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಲವಾರು ರಾಷ್ಟ್ರಗಳ ರಾಜತಾಂತ್ರಿಕರು ಭಾರತದಲ್ಲಿ ಬೀಡುಬಿಟ್ಟಿದ್ದಾರೆ. 95 ಕೋಟಿಗೂ ಅಧಿಕ ಮತದಾರರು ಸುಮಾರು 10 ಲಕ್ಷ ಬೂತ್‌ಗಳಲ್ಲಿ ಮತ ಚಲಾಯಿಸಲಿದ್ದಾರೆ ಎಂದರು.
ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರುವ ಹಿಂದಿನ 10 ವರ್ಷಗಳಲ್ಲಿ ನಡೆದ ಆಡಳಿತವನ್ನು ಜನ ನೋಡಿದ್ದಾರೆ. 60 ವರ್ಷ ಆಳಿದ ಕಾಂಗ್ರೆಸ್ ದೇಶದ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿರಲಿಲ್ಲ. 10 ವರ್ಷ ಆಡಳಿತದ ಮೋದಿ ಸರ್ಕಾರ ಅಭಿವೃದ್ಧಿಯ ಅಂಕಿ ಅಂಶಗಳ ಸಹಿತ ಶ್ವೇತಪತ್ರ ಹೊರಡಿಸಿದೆ ಎಂದರು.
ವಿಶ್ವದಲ್ಲೇ ಮೂರನೇ ಸ್ಥಾನದತ್ತ ಬೃಹತ್ ಆರ್ಥಿಕ ಶಕ್ತಿಯಾಗಿ ಭಾರತ ದಾಪುಗಾಲು ಹಾಕುತ್ತಿದೆ. ಕಾಂಗ್ರೆಸ್ ಅವಧಿಯ 10 ವರ್ಷದಲ್ಲಿ 2,800 ಮೆಗಾವಾಟ್ ಸೋಲಾರ್ ಶಕ್ತಿ ಉತ್ಪತ್ತಿಯಾಗುತ್ತಿತ್ತು. ಮೋದಿ ಅವಧಿಯಲ್ಲಿ 72 ಸಾವಿರ ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮನೆ ಮನೆಗಳಲ್ಲೂ ಸೋಲಾರ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದರು.
ಡಿಜಿಟಲ್ ಪೇಮೆಂಟ್ ಸಿಸ್ಟಂ, ಯುಪಿಐ, ಆರ್ಥಿಕ ಸ್ಥಿರತೆ ಕಾಪಾಡಿಕೊಂಡು ಬಂದಿದ್ದು ವಿಶೇಷವಾಗಿ ಅನಿವಾಸಿ ಭಾರತೀಯರಿಗೆ ವಿಶ್ವದೆಲ್ಲೆಡೆ ಗೌರವ ಸಿಗುತ್ತಿದೆ. ಮಹಿಳೆಯರಿಗೆ ಶೇ.33 ಮೀಸಲಾತಿ ಘೋಷಿಸಲಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ಘೋಷಿಸಿದ್ದು, ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತು ತಿನ್ನುವ ಕಾಂಗ್ರೆಸ್ ಅಸಲಿಯತ್ತನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಅಬಕಾರಿ, ಎಲ್ಲವೂ ಶೇ.80ರಷ್ಟು ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ತನ್ನದೆಂದು ಸುಳ್ಳು ಹೇಳುವ ಕಾಂಗ್ರೆಸ್ ಮೋಸವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಮಾಲತೇಶ್, ವಕ್ತಾರ ಎಸ್.ಎಸ್.ಜ್ಯೋತಿಪ್ರಕಾಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಪ್ರಮುಖರಾದ ಕೆ.ವಿ.ಅಣ್ಣಪ್ಪ, ರತ್ನಾಕರ ಶೆಣೈ, ಐಡಿಯಲ್ ಗೋಪಿ ಇತರರಿದ್ದರು.