ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಕೆ.ಜಿ.ಕುಮಾರಸ್ವಾಮಿ, ಟಿ.ಡಿ.ಮೇಘರಾಜ್, ಗಾಯತ್ರಿದೇವಿ ಮಲ್ಲಪ್ಪ, ಎಸ್.ದತ್ತಾತ್ರಿ, ಮಾಲತೇಶ್, ಎಸ್.ಜ್ಞಾನೇಶ್ವರ್, ಎನ್.ಜೆ.ನಾಗರಾಜ್, ಡಾ.ಶ್ರೀನಿವಾಸ ರೆಡ್ಡಿ, ಎಂ.ಬಿ.ಹರಿಕೃಷ್ಣ, ಮೋಹನರೆಡ್ಡಿ, ಸುರೇಖಾ ಮುರುಳೀಧರ್, ಅನಿತಾ ರವಿಶಂಕರ್, ಸುರೇಖಾ ಪಾಲಾಕ್ಷಪ್ಪ ಇದ್ದರು. 
ಜಿಲ್ಲೆ

ಆರೋಗ್ಯ ಸಚಿವರ ರಾಜೀನಾಮೆಗೆ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ

ಶಿವಮೊಗ್ಗ: ರಾಜ್ಯದಲ್ಲಿ ಬಾಣಂತಿಯರು ಮತ್ತು ಶಿಶುಗಳ ಸರಣಿ ಸಾವು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಕೂಡಲೇ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಇಡೀ ರಾಜ್ಯಾದ್ಯಂತ ಬಾಣಂತಿಯರ ಸಾವು ಆಘಾತಕಾರಿಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಹೆಚ್ಚು ಸಾವಿನ ಸಂಖ್ಯೆ ಇರುವುದು ಕಳವಳಕಾರಿ. ನಾನಾ ಭಾಗ್ಯಗಳನ್ನು ಕಲ್ಪಿಸುತ್ತಿರುವ ರಾಜ್ಯ ಸರ್ಕಾರ ಈ ಮೂಲಕ ಬಾಣಂತಿಯರ ಸಾವಿನ ಭಾಗ್ಯವನ್ನೂ ಕಲ್ಪಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರಿ ವ್ಯವಸ್ಥೆ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಹೊರಟು ಹೋಗಲಿದೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಮತ್ತು ಸಾವಿನ ಭಾಗ್ಯವನ್ನೇ ನೀಡುತ್ತಿದೆ. ಇದರ ಜತೆಗೆ ಬಾಣಂತಿಯರ ಸರಣಿ ಸಾವು ರಾಜ್ಯದಲ್ಲಿ ಸಂಭವಿಸಿದೆ. ಸರ್ಕಾರದ ನಿರ್ಲಕ್ಷದಿಂದಾಗಿ ಈ ಸಾವುಗಳು ಸಂಭವಿಸಿವೆ. ಇದಲ್ಲದೆ ಸಾವಿರಕ್ಕೂ ಅಧಿಕ ನವಜಾತ ಶಿಶುಗಳ ಸಾವು ಕೂಡ ಆಗಿದೆ. ಸರ್ಕಾರದಲ್ಲಿ ಯಾರಿಗೂ ಕಿಂಚಿತ್ ಜವಾಬ್ದಾರಿ ಇಲ್ಲ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಕಿಡಿಕಾರಿದರು.

ಈ ಪ್ರಮಾಣದ ಸಾವುಗಳನ್ನು ಹಿಂದಿನ ಯಾವುದೇ ಸರ್ಕಾರದಲ್ಲಿ ಜನರು ನೋಡಿರಲಿಲ್ಲ. ಈ ಸರ್ಕಾರಕ್ಕೆ ಕಂದಮ್ಮಗಳ ಹಾಗೂ ಬಾಣಂತಿಯರ ಶಾಪ ತಟ್ಟುತ್ತದೆ ಎಂದ ಅವರು, ಅಧಿಕಾರದ ಅಮಲಿನಲ್ಲಿರುವ ಅತ್ಯಂತ ದುಷ್ಟ, ದಾಷ್ಟೃ, ಭಂಡ ಸರ್ಕಾರ ಇದಾಗಿದೆ. ಕೂಡಲೇ ಮೃತಪಟ್ಟಿರುವ ಬಾಣಂತಿಯರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಅನಾಥವಾಗಿರುವ ಕಂದಮ್ಮಗಳನ್ನು ಸರ್ಕಾರವೇ ದತ್ತು ತೆಗೆದುಕೊಂಡು ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಮುಖಂಡರಾದ ಎಸ್.ದತ್ತಾತ್ರಿ, ಮಾಲತೇಶ್, ಎಸ್.ಜ್ಞಾನೇಶ್ವರ್, ಎನ್.ಜೆ.ನಾಗರಾಜ್, ಸುರೇಖಾ ಮುರುಳೀಧರ್, ಅನಿತಾ ರವಿಶಂಕರ್, ಸುರೇಖಾ ಪಾಲಾಕ್ಷಪ್ಪ, ಡಾ.ಶ್ರೀನಿವಾಸ ರೆಡ್ಡಿ, ಹರಿಕೃಷ್ಣ, ಮೋಹನ ರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.