ಜಿಲ್ಲೆ

ಜಿಎಸ್​ಟಿಯಿಂದ ಜನರ ಹಣ ಕೊಳ್ಳೆ ಹೊಡೆದ ಬಿಜೆಪಿ

ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್​ ಆರೋಪ

ಉಡುಪಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಒಳ್ಳೆಯದಿರಲಿ ಅಥವಾ ಕೆಟ್ಟದ್ದೇ ಇರಲಿ ಅದನ್ನು ವೈಭವೀಕರಿಸುವುದು ಬಿಜೆಪಿಯ ವಿಶೇಷತೆ. 2017ರಲ್ಲಿ ಜಿಎಸ್​ಟಿ ಜಾರಿಗೊಳಿಸಿದ ಕೇಂದ್ರ ಬಿಜೆಪಿ ಸರ್ಕಾರ ಇತ್ತೀಚೆಗೆ ಸ್ಲ್ಯಾಬ್​ ಇಳಿಕೆ ಮಾಡಿ ಅದನ್ನೂ ವೈಭವೀಕರಿಸುತ್ತಲೇ ಇದೆ. ಕಳೆದ 8 ವರ್ಷಗಳ ಕಾಲ ಜಿಎಸ್​ಟಿ ಮೂಲಕ ಜನರ ಹಣ ಕೊಳ್ಳೆ ಹೊಡೆದಿರುವುದು ಸುದ್ದಿಯೂ ಆಗಲಿಲ್ಲ, ವೈಭವೀಕರಣವೂ ಇರಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್​ ಆರೋಪಿಸಿದರು.

ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಶನಿವಾರ (ಅ.18) ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಣ ಲೂಟಿ ಮಾಡುತ್ತಿರುವುದು ಜನರಿಗೆ ತಿಳಿಯುತ್ತಿದ್ದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್​ಟಿ ಸ್ಲ್ಯಾಬ್​ 2ಕ್ಕೆ ಇಳಿಕೆ ಮಾಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್​ನಿಂದ ತೀವ್ರ ವಿರೋಧ

ನಾಲ್ಕು ಸ್ಲ್ಯಾಬ್​ನಲ್ಲಿ ದರ ಏರಿಕೆಯ ಜಿಎಸ್​ಟಿ ಜಾರಿಗೊಳಿಸಿದಾಗ ಕಾಂಗ್ರೆಸ್​ ಅದನ್ನು ಪ್ರಬಲವಾಗಿ ವಿರೋಧಿಸಿತ್ತು. ಸ್ಲ್ಯಾಬ್​ ಇಳಿಕೆ ಮಾಡುವಂತೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಪ್ರತಿಪಾದಿಸಿದ್ದರು. ಆದರೂ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿರಲಿಲ್ಲ. ಇಷ್ಟು ವರ್ಷಗಳ ಕಾಲ ಜನರಿಗೆ ತೆರಿಗೆಯ ಬರೆ ಎಳೆದಿರುವ ಕೇಂದ್ರ ಬಿಜೆಪಿ ಸರ್ಕಾರ, ಜಿಎಸ್​ಟಿ ಸ್ಲ್ಯಾಬ್​ 2ಕ್ಕೆ ಇಳಿಕೆ ಮಾಡಿ ಗಾಯಕ್ಕೆ ಮುಲಾಮು ಹಚ್ಚಿದೆ. ಅದನ್ನೂ ಸಹ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ನಮ್ಮ ಕಾರ್ಯಕರ್ತರು ಬಿಜೆಪಿಯ ಈ ಕುತಂತ್ರವನ್ನು ಜನರಿಗೆ ಮನದಟ್ಟು ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಸಂಸದ ಕೆ.ಜಯಪ್ರಕಾಶ್​ ಹೆಗ್ಡೆ, ಎಂಎಲ್​ಸಿ ಮಂಜುನಾಥ ಭಂಡಾರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್​, ಪಕ್ಷದ ಪ್ರಮುಖರಾದ ಕಿಶನ್​ ಹೆಗ್ಡೆ ಕೊಳ್ಕೆಬೈಲು, ಮುನಿಯಾಲು ಉದಯಕುಮಾರ್​ ಶೆಟ್ಟಿ, ಪ್ರಸಾದರಾಜ್​ ಕಾಂಚನ್​, ರಾಜ್ಯ ಮಹಿಳಾ ಕಾರ್ಯದರ್ಶಿ ಗೀತಾ ವಾಗ್ಳೆ, ಮಲ್ಯಾಡಿ ಶಿವರಾಂ ಶೆಟ್ಟಿ, ಮೀನಾಕ್ಷಿ ಮಾಧವ ಹಾಗೂ ಪಕ್ಷದ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ವಂದಿಸಿದರು. ಕಾಂಗ್ರೆಸ್​ ಜಿಲ್ಲಾ ವಕ್ತಾರ ಭಾಸ್ಕರ ರಾವ್​ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.