N.S.BOSARAJU 
ಜಿಲ್ಲೆ

ಏಮ್ಸ್ ವಿಚಾರ ಬಿಜೆಪಿ ನಾಯಕರ ಹೇಳಿಕೆ ಸರಿಯಲ್ಲ ತಾಕತ್ತಿದ್ದರೆ ಬಿಜೆಪಿ ನಾಯಕರು ಏಮ್ಸ್ ಜಾರಿ ಮಾಡಲಿ-ಎನ್‌ಎಸ್‌ಬಿ ಪ್ರಶ್ನೆ

ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡುವ ಕುರಿತು ರಾಜ್ಯ ಸರ್ಕಾರದಿಂದ ಸರಿಯಾದ ಪ್ರಸ್ತಾವನೆ ಬಂದಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಸರಿಯಾದ ಕ್ರಮವಲ್ಲ. ನಾವು ನಾಳೆಯೇ ಸಚಿವ ಸಂಪುಟ ಸಭೆಯಲ್ಲಿ ಪಾಸ್ ಮಾಡಿಸಿಕೊಡುತ್ತೇವೆ ತಾಕತ್ತಿದ್ದರೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸುತ್ತಾರಾ.? ಎಂದು ಸಣ್ಣ ನೀರಾವರಿ ಸಚಿವ ಎನ್. ಎಸ್.ಬೋಸರಾಜು ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರ ನೀತಿ ಏನೆಂದು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇವೆ. ಅನೇಕ ಬಾರಿ ಕರ್ನಾಟಕದ ಮೇಲೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿದ್ದಾರೆ. ಇದೀಗ ಏಮ್ಸ್ ವಿಚಾರದಲ್ಲೂ ಅದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಭೇಟಿಯಾದಾಗಲೂ ರಾಯಚೂರಿಗೆ ಏಮ್ಸ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಇದೀಗ ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಂಸತ್ತಿನಲ್ಲಿ ಉತ್ತರ ನೀಡಿರುವುದು ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಲಾಗುವ ಯೋಜನೆಗಳಲ್ಲಿ ೬೦:೪೦ ರ ಪ್ರಮಾಣದಲ್ಲಿ ಅನುದಾನ ನೀಡುವುದಾಗಿ ಹೇಳಿ ನೀಡುತ್ತಿಲ್ಲ.

ಸಣ್ಣ ನೀರಾವರಿ ಇಲಾಖೆಯಲ್ಲಿ ಪಿಎಂಕೆಎಸ್‌ವೈ ಹಾಗೂ ಆರ್‌ಆರ್‌ಆರ್ ಯೋಜನೆಯಡಿ ೩೦೭೨ ಕೋಟಿ ಅನುದಾನ ನೀಡಬೇಕಿತ್ತು ಆದರೆ ಈವರೆಗೂ ಅನುದಾನ ನೀಡಿಲ್ಲ. ಇದಲ್ಲದೇ ನಬಾರ್ಡ್ ಯೋಜನೆಯಡಿ ರೈತರಿಗೆ ಸಾಲಕ್ಕಾಗಿ ೫ ಸಾವಿರಕ್ಕೂ ಹೆಚ್ಚಿನ ಅನುದಾನ ನೀಡಬೇಕಿತ್ತು ಆದರೆ ಕೇವಲ ೨೩೪೨ ಕೋಟಿ ಮಾತ್ರ ಅನುದಾನ ನೀಡಲಾಗಿದೆ ಎಂದು ದೂರಿದರು.

ಮೊದಲಿನಿಂದಲೂ ದಕ್ಷಿಣ ಭಾರತಕ್ಕೆ ಬಿಜೆಪಿ ಸರ್ಕಾರದಿಂದ ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ. ಮೋದಿ ಮತ್ತು ಅಮಿತ ಶಾ ಸೇರಿ ದೇಶದಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬ ಸರ್ವಾಽಕಾರ ಆಡಳಿತ ನಡೆಸಬೇಕೆಂದು ವಿರೋಧ ಪಕ್ಷಗಳನ್ನು ನಿರ್ನಾಮಗೊಳಿಸಲು ಮುಂದಾಗಿದ್ದಾರೆ ಎಂದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ಪಾಸ್ ಮಾಡಿಸುತ್ತೇವೆ ಬಿಜೆಪಿಯ ನಾಯಕರು ಒಬ್ಬರಾದರೂ ರಾಯಚೂರಿಗೆ ಏಮ್ಸ್ ಕೊಡಿಸಲು ತಾಕಿತ್ತಿದ್ದರೇ ಎದುರು ಬಂದು ನಿಲ್ಲಲ್ಲಿ ಎಂದು ಗುಡುಗಿದರು.

ನಾರಾಯಣಪುರ ಬಲದಂಡೆ ಕಾಲುವೆಯಿಂದ ಏ.೧೪ರವರೆಗೆ ನೀರು ಹರಿಸುವಂತೆ ಜೆಡಿಎಸ್ ಶಾಸಕಿ ಕರೆಮ್ಮ ಅವರು ಪಾದಯಾತ್ರೆ ಮಾಡುತ್ತಿರುವುದು ಗಮನಕ್ಕಿದೆ. ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ಭಾಗವಹಿಸಿದ ಶಾಸಕರ ತೀರ್ಮಾನದಿಂದ ಈ ರೀತಿಯ ಸಮಸ್ಯೆಗಳಾಗಿವೆ.

ಸಭೆಯಲ್ಲಿ ೧೪ ದಿನ ಚಾಲೂ ೧೦ ದಿನ ಬಂದ್ ಎಂಬ ರೊಟೇಷನ್ ಮೇರೆಗೆ ಏ.೧-೬ವರೆಗೆ ನೀರು ಬಿಡಲು ತೀರ್ಮಾನಿಸಲಾಗಿತ್ತು ಆದರೆ ಅಲ್ಲಿದ್ದ ಶಾಸಕರು ನಿರಂತರವಾಗಿ ನೀರು ಬಿಡುವಂತೆ ತಿಳಿಸಿದ್ದರು. ಆಗ ಅದನ್ನು ಯಾರೂ ಕೂಡ ಆಕ್ಷೇಪ ಮಾಡಲಿಲ್ಲ ಇದೀಗ ಜಲಾಶಯದಲ್ಲಿ ನೀರಿಲ್ಲ ಇದರಿಂದಲೇ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

ಶಾಸಕ ಶಿವರಾಜ ಪಾಟೀಲ್ ತಮ್ಮ ಮೊಬೈಲ್ ಲೊಕೇಷನ್ ಟ್ರ‍್ಯಾಕ್ ಆಗುತ್ತಿದೆ ಎಂದು ಎಸ್ಪಿ ಅವರ ಮುಂದೆ ಹೇಳದೇ ದೂರು ನೀಡಬೇಕಿತ್ತು. ತನಿಖೆ ನಡೆದು ತಪ್ಪಿತಸ್ಥರು ಸಿಕ್ಕಿಹಾಕಿಕೊಳ್ಳುತ್ತಾರೆ. ದೂರು ನೀಡದೇ ಬರಿ ಮೌಖಿಕ ಹೇಳಿಕೆಗಳನ್ನು ನೀಡುವುದಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತೆ ಅದು ಶಾಸಕರಿರಲಿ, ಜನಸಾಮಾನ್ಯರೇ ಇರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿಎಸ್ ಹುಲಗೇರಿ ಇದ್ದರು.