ವಿಜಯಪುರ: ದಶಕಗಳ ಹೋರಾಟದ ಫಲವಾಗಿ ತಳವಾರ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಸತ್ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ನೀಡಿ ರಾಷ್ಟ್ರಪತಿ ಅಂಕಿತದೊಂದಿಗೆ ತಳವಾರ ಸಮುದಾಯವನ್ನು ಶಾಸನಬದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ್ದರೂ ಈವರೆಗೂ ಕಾಂಗ್ರೆಸ್ ಸಮುದಾಯದ ವಿಚಾರದಲ್ಲಿ ಕುತಂತ್ರ ಮಾಡುತ್ತಲೇ ಬಂದಿದೆ. ಆ ಸಮುದಾಯದ ಹಕ್ಕು ಮತ್ತು ಸೌಲಭ್ಯ ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎಂದು ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ವಗ್ಗೆ ಹರಿಹಾಯ್ದರು.
ತಳವಾರ ಸಮುದಾಯ ಸುಗ್ರೀವಾಜ್ಞೆ ಮೂಲಕ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಪಡೆದಿಲ್ಲ. ಬದಲಾಗಿ ಶಾಸನ ಬದ್ಧವಾಗಿ ಪ್ರಮಾಣ ಪತ್ರ ಪಡೆದಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ನಿರಂತರವಾಗಿ ಹುನ್ನಾರ ನಡೆಸುತ್ತಲೇ ಬಂದಿದ್ದು, ಇದೀಗ ತೆರೆಮರೆಯಲ್ಲಿ ಕುತಂತ್ರ ನಡೆಸಿರುವ ಗುಮಾನಿ ಹರಡಿದೆ. ಹಾಗೇನಾದರೂ ಕಾಂಗ್ರೆಸ್ ಹುನ್ನಾರ ನಡೆಸಿದ್ದೇ ನಿಜವಾದರೆ ರಾಜ್ಯದಲ್ಲಿ ಮುಂದೆಂದೂ ಈ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ನೆನಪಿಡಬೇಕೆಂದರು.
ಅಲ್ಲದೇ, ಜಿಲ್ಲೆಯೊಂದರಲ್ಲೇ 2 ಲಕ್ಷ ಜನ ತಳವಾರ ಸಮುದಾಯದವರಿದ್ದಾರೆ. ಪ್ರತೀ ವಿಧಾನ ಸಭೆ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಜನಸಂಖ್ಯೆ ಇದೆ. ಈಗಾಗಲೇ ಎಲ್ಲರೂ ಎಸ್‌ಟಿ ಪ್ರಮಾಣ ಪತ್ರ ಪಡೆದಿದ್ದಾರೆ. ಆದರೆ, ಅನುದಾನದ ಕೊರತೆ, ನಿಗಮಗಳಲ್ಲಾಗುತ್ತಿರುವ ಹಗರಣದಿಂದಾಗಿ ಆ ಸಮುದಾಯಕ್ಕೆ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಸಂಸದ ರಮೇಶ ಜಿಗಜಿಣಗಿ ಅವರು ಸಹ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದರು. ಇದೀಗ ಆ ಅನುದಾನಕ್ಕೂ ಕತ್ತರಿ ಹಾಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದಡಿ ಸಿಗುವ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕೆಂದು ಆಗ್ರಹಿಸಿದರು.
ಒಬಿಸಿ ರಾಜ್ಯ ಮೋರ್ಚಾದ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಮುಖಂಡರಾದ ಅನೀಲ ಜಮಾದಾರ, ಭರತ ಕೋಳಿ, ವಿಜಯ ಜೋಷಿ ಮತ್ತಿತರರಿದ್ದರು.