ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪನೆಗೆ ಪೂರಕವಾಗಿ ಅನುದಾನ ಒದಗಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೂ ರಾಜ್ಯ ಸರ್ಕಾರ ಈ ಕುರಿತು ಯಾವುದೇ ಪತ್ರ ವ್ಯವಹಾರ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಆರೋಪಿಸಿದರು.
ಸಕ್ಕರೆ ಉತ್ಪಾದನೆಯೊಂದರಿಂದಷ್ಟೇ ಮೈಶುಗರ್ ಪುನಶ್ಚೇತನ ಮಾಡಲು ಸಾಧ್ಯವಿಲ್ಲ. ಎಥೆನಾಲ್ ಘಟಕ ಸ್ಥಾಪನೆ ಹಾಗೂ ಸಹ ವಿದ್ಯುತ್ ಘಟಕಕ್ಕೆ ಶೀಘ್ರ ಚಾಲನೆ ನೀಡುವುದರಿಂದ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಖಾನೆಯಲ್ಲಿರುವ ಸಹ ವಿದ್ಯುತ್ ಘಟಕವು 30 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ. ಅದಕ್ಕೆ ಅನುಗುಣವಾಗಿ ಕಬ್ಬು ಅರೆಯುವಿಕೆ ಸಾಧ್ಯವಿಲ್ಲ. ಕಬ್ಬಿನ ಕೊರತೆ ಇರುವ ಕಾರಣ ಸಹ ವಿದ್ಯುತ್ ಘಟಕದ ಟರ್ಬೈನ್‌ನನ್ನು ಬ್ಯಾಕ್ ಪ್ರೆಷರ್ ಆಗಿ ಪರಿವರ್ತಿಸಿ 20 ರಿಂದ 24 ಮೆಗಾವ್ಯಾಟ್‌ಗೆ ಇಳಿಸಲಾಗಿದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ಕಬ್ಬು ಪೂರೈಕೆಯಾದರೂ ಸಹ ವಿದ್ಯುತ್ ಘಟಕವನ್ನು ಚಾಲನೆ ಮಾಡಬಹುದು. ಆದರೆ, ವಿದ್ಯುತ್ ಘಟಕ ಆರಂಭಕಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.
ಸೆಸ್ಕ್‌ಗೆ ಪಾವತಿಸಬೇಕಾದ 40 ಕೋಟಿ ರೂ ವಿದ್ಯುತ್ ಬಾಕಿ, ಕೆಎಸ್‌ಐಡಿಸಿ ಬಾಕಿ 90 ಕೋಟಿ ರೂ., ಆದಾಯ ತೆರಿಗೆ 37 ಕೋಟಿ ರೂ ಸೇರಿ ಒಟ್ಟು 191 ಕೋಟಿ ರೂಗಳನ್ನು ವಿವಿಧ ಸಂಸ್ಥೆಗಳಿಗೆ ಸರ್ಕಾರ ಪಾವತಿಸಬೇಕಿರುವುದರಿಂದ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸೂಕ್ತ ಅನುದಾನ ನೀಡಬೇಕು. ಇನ್ನು ವೇಜ್ ಬೋರ್ಡ್ ನಿರ್ಣಯದ ಪ್ರಕಾರ 8.3 ಕೋಟಿ ರೂಗಳನ್ನು ಕಾರ್ಮಿಕರಿಗೆ ನೀಡಲು ಕಳೆದ ಬಿಜೆಪಿ ಸರ್ಕಾರ ಮತ್ತು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತ್ತು. ಹೈಕೋರ್ಟ್ ಕೂಡ ಕಾರ್ಮಿಕರಿಗೆ ನಾಲ್ಕು ವಾರದೊಳಗೆ ಹಣ ಪಾವತಿ ಮಾಡುವ ಕುರಿತಂತೆ ಆದೇಶ ಹೊರಡಿಸಿದ್ದರೂ ಸರ್ಕಾರ ಕಾರ್ಮಿಕರಿಗೆ ಹಣ ನೀಡುವುದಕ್ಕೆ ನಿರ್ಲಕ್ಷೃ ಮಾಡುತ್ತಿದೆ ಎಂದು ಆರೋಪಿಸಿದರು.
ಕಾರ್ಖಾನೆಗೆ ನೇಮಕಗೊಂಡಿರುವ ವ್ಯವಸ್ಥಾಪಕ ನಿರ್ದೇಶಕರು ಆಡಳಿತದಲ್ಲಿ ಹೆಚ್ಚಿನ ಉತ್ಸಾಹವನ್ನೇ ತೋರಿಸುತ್ತಿಲ್ಲ. ಕಬ್ಬು ಅರೆಯುವಿಕೆ ಕಾರ್ಯಕ್ರಮಕ್ಕೆ ಬಂದಿದ್ದವರು ಮತ್ತೆ ಕಾರ್ಖಾನೆ ಕಡೆ ತಿರುಗಿನೋಡಿಲ್ಲ. ತಾಂತ್ರಿಕವಾಗಿ ಯಾವುದೇ ನೈಪುಣ್ಯತೆಯನ್ನೂ ಹೊಂದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಂತ್ರಿಕ ನಿಪುಣರಾಗಿದ್ದ ಅಪ್ಪಾ ಸಾಹೇಬ್ ಪಾಟೀಲ ಅವರನ್ನು ವ್ಯವಸ್ಥಾಪಕ ಹುದ್ದೆಗೆ ನೇಮಿಸಲಾಗಿತ್ತು. ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸುವಲ್ಲಿ, ಸಮರ್ಥವಾಗಿ ಮುನ್ನಡೆಸುವಲ್ಲಿ ಸಫಲತೆ ಸಾಧಿಸಿದ್ದರು. ನೂತನ ಕಾಂಗ್ರೆಸ್ ಸರ್ಕಾರ ಅವರ ಜಾಗಕ್ಕೆ ಐಎಎಸ್ ಅಕಾರಿಯೊಬ್ಬರನ್ನು ನೇಮಿಸಿದೆ. ಅವರನ್ನು ಮತ್ತೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಮರು ನೇಮಕ ಮಾಡುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ರೈತರು ಕಬ್ಬು ಮತ್ತು ಭತ್ತದ ನಾಟಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಬೆಳೆಗಳಿಗೆ ಜಿಲ್ಲಾಡಳಿತ ಕಟ್ಟು ಪದ್ಧತಿಯಲ್ಲಿ ನೀರು ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ. ರೈತರು ಭತ್ತದ ನಾಟಿಯಲ್ಲಿ ತೊಡಗಿದ್ದು, ದೀರ್ಘಾವಧಿ ಅಥವಾ ಅಲ್ಪಾವಧಿ ಬೆಳೆ ಬೆಳೆಯುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ. ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಇದ್ದರು.