ಮೈಸೂರು: ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಅಪ್ಪಣ್ಣ ಪಡೆದಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ಮೈಸೂರು ತಹಶೀಲ್ದಾರ್ ರದ್ದು ಪಡಿಸಿ ಆದೇಶ ಹೊರಡಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಎಸ್.ಎಚ್. ಸುಭಾಷ್ ಆಗ್ರಹಿಸಿದ್ದಾರೆ.
ಕಾನೂನು ಬಾಹಿರವಾಗಿ ಪಡೆದಿರುವ ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ನಾನು ಸಲ್ಲಿಸಿದ್ದ ದೂರು ಅರ್ಜಿಯ ಮೇರೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಈ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಸಭೆಯಲ್ಲಿ ಅಪ್ಪಣ್ಣಗೆ ನೀಡಿದ್ದ ಜಾತಿ ಪ್ರಮಾಣ ಪತ್ರ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನದ ಆಧಾರದ ಮೇಲೆ ಮೈಸೂರು ತಹಶೀಲ್ದಾರ್ ಜೂ.12 ರಂದು ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಆದೇಶ ಹೊರಡಿಸಿ ದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಸರ್ಕಾರ ‘ತಳವಾರ’ ಹಾಗೂ ‘ತಳವಾರ ನಾಯಕ’ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಟ್ಟು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಆದರೆ, ‘ಪರಿವಾರ’ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟಿಲ್ಲ. ‘ಪರಿವಾರ ನಾಯಕ’ ಹಾಗೂ ‘ಪರಿವಾರ’ ಬೇರೆ ಸಮುದಾಯಗಳಾಗಿವೆ. ಆದರೆ, ಕೆಲವರು ಪರಿವಾರ ಪದಗಳ ಗೊಂದಲದ ಲಾಭ ಪಡೆಯಲು ಯತ್ನಿಸುತ್ತಿದ್ದು, ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಅಪ್ಪಣ್ಣ ‘ಪರಿವಾರ’ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಪರಿವಾರ ಪದವು ಬೆಸ್ತ ಸಮುದಾಯದ ಪರ್ಯಾಯ ಪದವಾಗಿದೆ. ಆದರೆ, ಇವರು ನಾಯಕ ಸಮುದಾಯಕ್ಕೆ ನೀಡಿರುವ ಪರಿಶಿಷ್ಟ ಪಂಗಡದ ಮೀಸಲಾತಿ ಪಡೆದುಕೊಂಡಿರುವುದು ಕಾನೂನು ಬಾಹಿರ. ಕೂಡಲೇ ಅವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.