ಜಿಲ್ಲೆ

ಬಜೆಟ್ನಲ್ಲಿ ದಲಿತರ ಹಣ ಕಬಳಿಸಲು ಸಂಚು

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯ ಸರ್ಕಾರದ ಮುಂದಿನ ಬಜೆಟ್​ನಲ್ಲಿ ದಲಿತರ ಕಲ್ಯಾಣಕ್ಕೆ ಮೀಸಲಿಡಬೇಕಾದ 14,488 ಕೋಟಿ ರೂ. ದುರ್ಬಳಕೆ ಮಾಡಲು ಹೊಂಚು ಹಾಕಿ ಕುಳಿತಿದೆ. ಈಗಾಗಲೇ ಐದು ಗ್ಯಾರೆಂಟಿಗಳಿಗೆ ಸಂಬಂಧಿಸಿದಂತೆ 'ದಲಿತರ ಮೀಸಲು ನಿಧಿ' ಗೆ ಕನ್ನ ಹಾಕಲು ಪ್ರಸ್ತಾವನೆ ಸಿದ್ಧಪಡಿಸಿದೆ. ಕಾಂಗ್ರೆಸ್​ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿಯನ್ನು ಬಿಜೆಪಿ ಒಪ್ಪುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತೇವೆ. ಅದಕ್ಕಾಗಿ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಜನಾಂದೋಲನ ನಡೆಸಲಾಗುವುದು ಎಂದು ವಿಧಾನ ಪರಿಷತ್​ ವಿಪಕ್ಷ ಉಪನಾಯಕ ಎನ್​. ರವಿಕುಮಾರ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಎಸ್​ಸಿ ವರ್ಗಕ್ಕೆ ಮೀಸಲಿಟ್ಟ 7713 ಕೋಟಿ ರೂ. ಮತ್ತು ಎಸ್ಟಿ ವರ್ಗಕ್ಕೆ ಮೀಸಲಿಟ್ಟ 3430 ಕೋಟಿ ರೂ. ಸೇರಿ ಒಟ್ಟು 11,144.00 ಸಾವಿರ ಕೋಟಿ ರೂ.ಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿದೆ. 2024ರಲ್ಲಿ ಎಸ್​ಸಿ ಎಸ್ಪಿ ನಿಧಿಯಿಂದ 9980 ಕೋಟಿ ರೂ. ಮತ್ತು ಟಿಎಸ್ಪಿ ನಿಧಿಯಿಂದ 4302 ಕೋಟಿ ರೂ. ಸೇರಿ ಒಟ್ಟು 14,282 .ಕೋಟಿ ರೂ. ಹಣವನ್ನು ದುರುಪಯೋಗಿಸಿಕೊಂಡಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾರ 1 ಪೈಸೆ ಮುಟ್ಟಲ್ಲ

ಡಾ. ಅಂಬೇಡ್ಕರ್​ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಲಿಡ್ಕರ್​, ಸಫಾಯಿ ಕರ್ಮಚಾರಿ ಅಭಿವೃಧಿ ನಿಗಮ, ಎಸ್ಸಿ, ಎಸ್ಟಿ ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೋರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಯೂ ಜಾರಿಯಾಗುತ್ತಿಲ್ಲ. ಸಾರಿಗೆ ಸಂಬಳಕ್ಕೂ, ಕಾಸಿಲ್ಲದ ದಿವಾಳಿ ಸ್ಥಿತಿಯಿದೆ. ದಲಿತರ ಹಣಕ್ಕೆ ಕನ್ನಹಾಕಿದ ಸಿಎಂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಹಣದಲ್ಲಿ 1 ಪೈಸೆಯನ್ನೂ ಮುಟ್ಟುವುದಿಲ್ಲ ಎಂದರು.

ಪಿಂಚಣಿ ನೀಡಲು ಗತಿಯಿಲ್ಲ

ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಸುಮಾರು 6 ಸಾವಿರಕ್ಕಿಂತ ಹೆಚ್ಚಿನ ಶಾಲೆಗಳನ್ನು ಮುಚ್ಚಲು ಹೊರಟಿದೆ. ಹಿಂದುಳಿದ ಜಿಲ್ಲೆಗಳಲ್ಲಿರುವ 9 ವಿವಿಗಳನ್ನು ಬಂದ್​ ಮಾಡಲು ತಯಾರಿ ನಡೆಸುತ್ತಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕರಿಗೆ ಪಿಂಚಣಿ ನೀಡಲು ರಾಜ್ಯಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ದೇಶದಲ್ಲೇ ಅತ್ಯಂತ ಪ್ರಗತಿಪರ ರಾಜ್ಯವನ್ನು ಈ ಸ್ಥಿತಿ ತಂದುನಿಲ್ಲಿಸಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ, ವಿಭಾಗ ಪ್ರಭಾರಿ ಉದಯ್​ ಕುಮಾರ್​ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ,ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ ಮತ್ತು ಗುರುರಾಜ್​ ಗಂಟಿಹೊಳೆ , ಯಶ್ಪಾಲ್​ ಸುವರ್ಣ, ಮಾಜಿ ಶಾಸಕ ಹರ್ಷವರ್ಧನ್​ ನಂಜನಗೂಡು, ಮುಖಂಡರಾದ ಸಾಬು ದೊಡ್ಮನಿ, ಗೋಪಾಲ್​ ಘಟ್​ ಕಾಂಬಳೆ, ಓದೋ ಗಂಗಪ್ಪ, ದಿನಕರ ಬಾಬು, ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್​ ನಾಯಕ್​, ಮಟ್ಟಾರು ರತ್ನಾಕರ ಹೆಗ್ಡೆ, ಎಸ್​ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರ ಪಂಚವಟಿ ಉಪಸ್ಥಿತರಿದ್ದರು.

ದಲಿತರ ಬೋರ್​ ವೆಲ್​, ಜಮೀನು ಖರೀದಿಗೆ ಬಳಸಬೇಕಾಗಿದ್ದ ಹಣವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಎಲ್ಲಾ ಸರ್ಕಾರಗಳು ದಲಿತರ ಕಲ್ಯಾಣಕ್ಕೆ ಬಜೆಟ್ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿಟ್ಟು ಖರ್ಚು ಮಾಡುತ್ತಿದ್ದವು. ಆದರೆ ಸಿದ್ದರಾಮಯ್ಯ 7ಡಿ ಕಾನೂನು ರದ್ದುಗೊಳಿಸಿ ಎಸ್​ ಸಿ ಪಿಟಿ ಹಣ ಅನ್ಯಕಾರ್ಯಕ್ಕೆ ಬಳಸಲು ಅನುಮಾಡಿಕೊಟ್ಟಿದ್ದಾರೆ. 2 ವರ್ಷದಲ್ಲಿ 25,000 ಕೋಟಿ ಹಣ ದುರುಪಯೋಗವಾಗಿರುವುದು ಹೇಯಕೆಲಸ. ಸಿದ್ದರಾಮಯ್ಯ ಸರ್ಕಾರದಿಂದ ದಲಿತರಿಗೆ ಅನ್ಯಾಯವಾಗಿದೆ. -ರಮೇಶ್​ ಜಿಗಜಿಣಗಿ, ಸಂಸದರು, ವಿಜಯಪುರ ಜಿಲ್ಲೆ.