ಜಿಲ್ಲೆ

ಸಿಎಂ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗರಿಗಿಲ್ಲ

ಮರಿದೇವ ಹೂಗಾರ

ಹುಬ್ಬಳ್ಳಿ: ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ದುರ್ಘಟನೆಗೆ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವ ಮೊದಲು ಬಿಜೆಪಿ ನಾಯಕರು ತಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಎಷ್ಟು ಕಾಲ್ತುಳಿತಗಳು ಸಂಭವಿಸಿವೆ ಎಂಬುದನ್ನು ಕಣ್ಣು ತೆರೆದು ನೋಡಲಿ. ಮೊದಲು ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲಿ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ತಿರುಗೇಟು ನೀಡಿದ್ದಾರೆ

ಅವರು ಪತ್ರಿಕಾ ಪ್ರಕಟಣೆ ನೀಡಿ, ಬಿಜೆಪಿ ನಾಯಕರು ದ್ವಿಮುಖ ನೀತಿ ಕೈಬಿಡಬೇಕು. ಇಲ್ಲಿ ಹಾರಾಟ, ತೂರಾಟ ಮಾಡುವ ನೀವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾಲ್ತುಳಿತದ ಘಟನೆಗಳಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ. ಆಗ ಯಾಕೆ ರಾಜೀನಾಮೆ ಪಡೆಯಲಿಲ್ಲ ? ಎಂದು ಪ್ರಶ್ನಿಸಿದ್ದಾರೆ.

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟಿದ್ದರು. ರೈಲ್ವೆ ಮಂತ್ರಿ ಏಕೆ ರಾಜೀನಾಮೆ ನೀಡಲಿಲ್ಲ? ಕೇಂದ್ರ ಸರ್ಕಾರ ಇದರ ಜವಾಬ್ದಾರಿ ಯಾಕೆ ಹೊರಲಿಲ್ಲ? ಮಹಾಕುಂಭ ಮೇಳದಲ್ಲಿ ವರ್ಷಾನುಗಟ್ಟಲೆ ಸಿದ್ಧತೆ ಮಾಡಿಕೊಂಡರೂ ನೂರಾರು ಜನರು ಕಾಲ್ತುಳಿತದಲ್ಲಿ ಮೃತಪಟ್ಟರು. ಅಲ್ಲಿಯ ಮುಖ್ಯಮಂತ್ರಿ ಯಾಕೇ ರಾಜೀನಾಮೆ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಉತ್ತರ ಪ್ರದೇಶದ ಹಾತರಸ್ ಜಿಲ್ಲೆಯ ಪೂಲ್ರಾಯ್ ಗ್ರಾಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ 116 ಮಂದಿ ಕಾಲ್ತುಳಿತದಲ್ಲಿ ಮೃತಪಟ್ಟರು. ಆಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರಾಜೀನಾಮೆ ಪಡೆಯಲಿಲ್ಲ ಏಕೆ? ಗುಜರಾತ್‌ನಲ್ಲಿ 2022ರಲ್ಲಿ ಮೊರ್ಬಿ ಪಟ್ಟಣ ಬಳಿಯ ಮಚ್ಚು ನದಿಯಲ್ಲಿ ನವೀಕರಣಗೊಂಡ ತೂಗು ಸೇತುವೆ ಮುರಿದು 60 ಜನರು ಮೃತಪಟ್ಟರು. ಅಲ್ಲಿಯ ಮುಖ್ಯಮಂತ್ರಿ ರಾಜೀನಾಮೆಯನ್ನು ಬಿಜೆಪಿಯವರು ಪಡೆಯಲಿಲ್ಲ ಏಕೆ? 2013ರಲ್ಲಿ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಕಾಲ್ತುಳಿತದಲ್ಲಿ 89 ಜನರು ಮೃತಪಟ್ಟಿದ್ದರು. ಆಗ ಏಕೆ ಅಲ್ಲಿಯ ಮುಖ್ಯಮಂತ್ರಿ ರಾಜೀನಾಮೆ ಪಡೆಯಲಿಲ್ಲ? ಎಂದು ಜರಿದಿದ್ದಾರೆ.

ಅಲ್ಲಿಯ ಬಿಜೆಪಿಯವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಸರ್ಕಾರವನ್ನು ವಜಾ ಮಾಡಲು ಹೇಳಲಿಲ್ಲ ಏಕೆ? ಈ ಇಬ್ಬಗೆ ನೀತಿ ಕೈಬಿಡಬೇಕು. ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ನಮ್ಮಲ್ಲಿ ಏನಾದರೂ ತಪ್ಪು ನಡೆದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಆದರೆ ಬಿಜೆಪಿಯವರು ಕೇವಲ ಮಾತುಗಾರರು ಅಷ್ಟೇ ಎಂದು ಬಿಜೆಪಿ ವಿರುದ್ಧ ಶಾಸಕ ಪ್ರಸಾದ ಅಬ್ಬಯ್ಯ ಹರಿಹಾಯ್ದಿದ್ದಾರೆ.