ಅಡಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ 
ಜಿಲ್ಲೆ

ಅಡಕೆಗೆ ಕ್ಯಾನ್ಸರ್‌ಕಾರಕ ಹಣೆಪಟ್ಟಿ ಕಟ್ಟಿದ್ದು ಬಿಜೆಪಿ

ನವೀನ ಬಿ.ಎಂ

ಶಿವಮೊಗ್ಗ: ಕಾಂಗ್ರೆಸ್ ನೇತೃತ್ವದ ಸರ್ಕಾರ ಅಡಕೆ ಕ್ಯಾನ್ಸರ್‌ಕಾರಕವೆಂದು ಅಫಿಡವಿಟ್ ಸಲ್ಲಿಸಿದೆ ಎಂಬ ಶಾಸಕ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಸುಳ್ಳು ಎಂದು ಅಡಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಹೇಳಿದರು.

ಅಡಕೆ ಕ್ಯಾನ್ಸರ್‌ಕಾರಕವೆಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲಿ ಅಡಕೆ ಕುರಿತು ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳಿಕೆ ನೀಡುವ ಮೂಲಕ ಅಡಕೆ ಬೆಳೆಗಾರರ ದಿಕ್ಕುತಪ್ಪಿಸುವ ವ್ಯರ್ಥ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಡಕೆ ಸಂಶೋಧನೆ ಕೇಂದ್ರ ಆರಂಭ ಹಾಗೂ ಮಂಡಳಿ ರಚನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡದಿರುವ ಕಾರಣ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಅಡಕೆ ಬೆಳೆಗಾರರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ಅಡಕೆ ಮಾನ ಹಾಗೂ ಮೌಲ್ಯವನ್ನು ಕಳೆದ ಬಿಜೆಪಿಯು ರೈತರ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.

2013ರಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದ ನಾಗರಿಕರ ಆರೋಗ್ಯ ಕಾಪಾಡುವ ಸಲುವಾಗಿ ತಂಬಾಕು ಹಾಗೂ ನಿಕೋಟಿನ್ ಅಂಶವನ್ನು ಹೊಂದಿರುವ ಗುಟ್ಖಾ ಹಾಗೂ ಪಾನ್ ಮಸಾಲಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿರ್ಬಂಧಿಸುವ ಬಗ್ಗೆ ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ನಿಯಮಗಳು-2011ರ ನಿಯಮ- 2, 3, 4ಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಅಡಕೆ ಬೆಳೆಯ ಮಂಡಳಿ ರಚನೆ ಮಾಡದೆ ಬೆಳೆಗಾರರಿಗೆ ದ್ರೋಹವೆಸಗುತ್ತಿದೆ. ಮೈಸೂರಿನ ಸಿಎಫ್‌ಟಿಆರ್‌ಐ, ಜೆಎನ್‌ಯು ವರದಿ ಹಾಗೂ ಎಂ.ಎಸ್.ರಾಮಯ್ಯ ಆರೋಗ್ಯ ಸಂಸ್ಥೆ ವರದಿ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ಗೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲವೆಂದು ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. ಸಂತೇಕಡೂರು ವಿಜಯಕುಮಾರ್, ಧೀರರಾಜ್ ಹೊನ್ನವಿಲೆ ಸುದ್ದಿಗೋಷ್ಠಿಯಲ್ಲಿದ್ದರು.