ಜಿಲ್ಲೆ

ಡಾ.ಶಶಿಧರ್ ಬಿಜೆಪಿ ಸೇರ್ಪಡೆ: ಮಾನಸ ಸಮೂಹ ಸಂಸ್ಥೆಗಳ ಅಧ್ಯಕ್ಷರಿಂದ ಘೋಷಣೆ

Chikkaballapur

ಗೌರಿಬಿದನೂರು: ತಾಲೂಕಿನ ಖ್ಯಾತ ವೈದ್ಯ ಮಾನಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಚ್.ಎಸ್.ಶಶಿಧರ್ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದಾರೆ.
ನಗರದ ಮಾನಸ ಆಸ್ಪತ್ರೆ ಬಳಿ ಭಾನುವಾರ ನಡೆದ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಾ.ಎಚ್.ಎಸ್.ಶಶಿಧರ್, ದೇಶದ ಪ್ರಧಾನಿಯೇ ಸ್ವಚ್ಛಭಾರತ್ ಎಂದು ಪೊರಕೆ ಹಿಡಿದು ಬೀದಿಗೆ ಬಂದಾಗ ಕೋಟ್ಯಂತರ ಅಭಿಮಾನಿಗಳು ಅವರನ್ನು ಹಿಂಬಾಲಿಸಿದರು. ಆದರೆ ಈ ಮೊದಲು ದಶಕಗಳ ಕಾಲ ದೇಶವನ್ನು ಆಡಳಿತ ನಡೆಸಿದ ಪಕ್ಷದವರಿಗೆ ಏಕೆ ಇಂತಹ ಕಲ್ಪನೆಗಳು ಬಂದಿರಲಿಲ್ಲ. ಮೋದಿ ಹಲವು ಪರಿವರ್ತನೆಗಳನ್ನು ತರುತ್ತಿದ್ದಾರೆ. ಸ್ವಚ್ಛವಾಗಿದ್ದು ಹೇಗೆ ಸಮಾಜಸೇವೆ ಮಾಡಬೇಕು ಎಂಬುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ. ಮೋದಿ ಅವರ ಸರಳತೆ, ವಿಚಾರಧಾರೆ ಹಾಗೂ ವ್ಯಕ್ತಿತ್ವಕ್ಕೆ ಮನಸೋತು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದರು.

ಪಕ್ಷದ ವಿಚಾರಧಾರೆಗಳಿಂದ ಆಕರ್ಷಿತನಾಗಿದ್ದೇನೆ. ಸಾಮಾನ್ಯ ಕಾಲಾಳುವಾಗಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಕಸ ಗುಡಿಸು ಎಂದರೆ ಗುಡಿಸುತ್ತೇನೆ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ನಂದೀಶ್‌ರೆಡ್ಡಿ ಹಾಗೂ ಪುಟ್ಟಸ್ವಾಮಿಗೌಡ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರಿಬ್ಬರೂ ಮುಂದೆ ಬರಲಿಲ್ಲ. ಈಗ ಸ್ಥಳೀಯರೇ ಆದ ಡಾ.ಶಶಿಧರ್ ಪಕ್ಷಕ್ಕೆ ಬರುತ್ತಿರುವುದು ಕಾರ್ಯಕರ್ತರಿಗೆ ಖುಷಿ ನೀಡಿದೆ. ತಾಲೂಕಿನಲ್ಲಿ 30 ವರ್ಷಗಳಿಂದ ವೈದ್ಯಕೀಯ ಸೇವೆ ತೆಗೆ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿರುವ ಶಶಿಧರ್ ಅವರ ಆಗಮನದಿಂದ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.


ತಾಲೂಕು ಅಧ್ಯಕ್ಷ ರಮೇಶ್‌ರಾವ್ ಮಾತನಾಡಿ, ಹಿಂದಿನ ಚುನಾವಣೆಯ ಕಹಿ ಮರೆತು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿಧರ್, ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ಮುಖಂಡ ಮುನಿಲಕ್ಷ್ಮಮ್ಮ ಇತರರಿದ್ದರು.

ರಾಜಕೀಯ ಸಂಚಲನ: ಶಾಸಕ ಶಿವಶಂಕರರೆಡ್ಡಿ ಯಾವಾಗಲೂ ಸ್ಥಳೀಯ ಅಭ್ಯರ್ಥಿಗಳನ್ನು ಗೆಲ್ಲಿಸಿ. ಹೊರಗಿನವರಿಗೆ ಮಣೆ ಹಾಕಬೇಡಿ ಎಂದು ಹೇಳುತ್ತಿರುತ್ತಾರೆ. ಈಗ ಬಿಜೆಪಿ ಸ್ಥಳೀಯರೇ ಆದ ಹಾಗೂ ತಮ್ಮ ಸರಳ ಸಜ್ಜನಿಕೆಗೆ ಹೆಸರಾಗಿರುವ ಖ್ಯಾತ ವೈದ್ಯ ಶಶಿಧರ್ ಅವರನ್ನು ಪಕ್ಷಕ್ಕೆ ಕರೆತಂದು ಪಕ್ಷದ ಸಾರಥ್ಯವನ್ನು ವಹಿಸುವ ಮೂಲಕ ತಾಲೂಕಿನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಸಾಧನಾ ಸಮಾವೇಶ ಬಳಿಕ ತಾಲೂಕಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಡಾ.ಶಶಿಧರ್ ಅವರನ್ನು ಪಕ್ಷಕ್ಕೆ ಅದ್ದೂರಿಯಾಗಿ ಸ್ವಾಗತಿಸಲು ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಆ ಮೂಲಕ ತಾಲೂಕಿನಲ್ಲಿ ರಾಜಕೀಯ ವಿರೋಧಿಗಳಿಗೆ ಪಕ್ಷದ ಶಕ್ತಿ ಸಾಮರ್ಥ್ಯ ತೋರ್ಪಡಿಸಲು ಪಕ್ಷ ವೇದಿಕೆ ಸಿದ್ಧಪಡಿಸುತ್ತಿದೆ.