ಜಿಲ್ಲೆ

ಬಿಜೆಪಿ, ಜೆಡಿಎಸ್ ಕುತಂತ್ರದ ಹೋರಾಟಕ್ಕೆ ಚುನಾವಣೆಯಲ್ಲಿ ಸೋಲಾಗಿದೆ : ಸಚಿವ ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಜೆಡಿಎಸ್ ಹಾಗೂ ಬಿಜೆಪಿ ಜತೆಗೆ ಸೇರಿ ಸುಳ್ಳನ್ನು ಸತ್ಯ ಮಾಡುವ ಕುತಂತ್ರದ ಹೋರಾಟಗಳಿಗೆ ಜನರು ವಿಧಾನಸಭೆ ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರು ವುದು ಸಂತಸದ ವಿಚಾರ. ನಮ್ಮ ನಿರೀಕ್ಷೆಗೆ ತಕ್ಕ ಹಾಗೆ ಫಲಿತಾಂಶ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಜನರು ಬೆಂಬಲ ನೀಡಿದ್ದಾರೆ.ನಮ್ಮ ಗ್ಯಾರಂಟಿಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು.

ಸಿದ್ದರಾಮಯ್ಯ ಪ್ರಮಾಣಿಕ ರಾಜಕಾರಣಿ ಹಾಗೂ ಜನಪರ ರಾಜಕಾರಣಿ ಎಂಬುದು ಜನರಿಗೆ ಗೊತ್ತಿದೆ. ಜನರ ಹಿತಕ್ಕೆ ವಿರುದ್ಧವಾಗಿ ಅವರು ಎಂದಿಗೂ ಕೆಲಸ ಮಾಡುವುದಿಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಮೂರು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಿದ್ದರು. ಆದರೆ, ಜನರು ಸರಿಯಾದ ತೀರ್ಪು ನೀಡಿದ್ದಾರೆ ಎಂದರು.

ಮುಡಾ ಒಂದು ಹಗರಣವೇ ಅಲ್ಲ. ಆದರೆ, ಆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಜಕೀಯ ಮಾಡಿದರು. ಆ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿದರು. ಸರ್ಕಾರವನ್ನು ಕೆಡವಲು ಪ್ರಯತ್ನ ನಡೆಸಿದರು. ಅದಕ್ಕೆ ತಕ್ಕ ಶಾಸ್ತಿಯನ್ನು ಜನರು ಮಾಡಿದ್ದಾರೆ ಎಂದರು.