ಚನ್ನಪಟ್ಟಣ: ದೇಶದಲ್ಲಿ ನುಡಿದಂತೆ ನಡೆಯುವ ರಾಜಕೀಯ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಭರವಸೆಗೆ ಮಾತ್ರ ಸೀಮಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕುಟುಕಿದರು.
ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನಾ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿ ನೀಡುವ ಎಲ್ಲ ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ. ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಮೂಲಕ ನಾವು ನುಡಿದಂತೆ ನಡೆಯುವವರು ಎಂಬುದನ್ನು ನಿರೂಪಿಸಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್‌ನವರು ಕೇವಲ ಹೇಳುತ್ತಾರೆ. ಆದರೆ, ಯಾವುದನ್ನೂ ಮಾಡುವುದಿಲ್ಲ. ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಂದೆಯೂ ಕೈ ಅಧಿಕಾರಕ್ಕೆ
ಮೈತ್ರಿ ಪಕ್ಷಗಳು ನಮ್ಮ ಸರ್ಕಾರ ಬೀಳುತ್ತದೆ ಎಂಬ ಕನಸು ಕಾಣುತ್ತಿದ್ದಾರೆ. ಆದರೆ, ಅದು ಕನಸಾಗಿಯೇ ಉಳಿಯಲಿದೆ. ಕೇವಲ ಈ ಉಳಿದ ಅವಧಿಯಲ್ಲದೇ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಎಂದೆಂದಿಗೂ ಬಡವರ ಪರ. ಆದರೆ, ಬಿಜೆಪಿ ಮತ್ತು ಜೆಡಿಎಸ್‌ನವರು ಉದ್ಯಮಿಗಳ ಪರ. ಆದರೂ, ನಮ್ಮ ಜನರನ್ನು ಚುನಾವಣಾ ಸಮಯದಲ್ಲಿ ಯಾಮಾರಿಸುತ್ತಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಹಕಾರದಿಂದ ಕೋಟ್ಯಂತರ ರೂ. ಅನುದಾನ ಕ್ಷೇತ್ರಕ್ಕೆ ಲಭಿಸಿದೆ ಎಂದು ಸಚಿವರು ತಿಳಿಸಿದರು.
ಎಚ್ಡಿಕೆ ವಿರುದ್ಧ ಇಕ್ಬಾಲ್ ವಾಗ್ದಾಳಿ!
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ತಾಲೂಕಿನಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ. ನಮ್ಮ ಸರ್ಕಾರವು ಅಭಿವೃದ್ಧಿಯ ಬಾಗಿಲು ತೆಗೆದಿದೆ. ಈ ಹಿಂದೆ ನೀವು ಒಬ್ಬರನ್ನು ಶಾಸಕರನ್ನಾಗಿ ಮಾಡಿದ್ದೀರಿ. ಆದರೆ, ಅವರು ನಿಮ್ಮ ಮತವನ್ನು ತಿರಸ್ಕರಿಸಿ ಬೇರೆ ಕ್ಷೇತ್ರಕ್ಕೆ ಹೋಗಿ ಅಧಿಕಾರ ಅನುಭವಿಸುತ್ತಿದ್ದಾರೆ. ಈ ಹಿಂದೆ ನೀವು ಕೊಟ್ಟ ಶಕ್ತಿ ಹಾಗೂ ಮತದಿಂದ ರಾಜ್ಯದ ಸಿಎಂ ಆಗಿದ್ದರು. ಆದರೆ, ಅಧಿಕಾರದಲ್ಲಿದ್ದಾಗ ಒಂದು ಕ್ಷಣವೂ ಅವರು ಕ್ಷೇತ್ರದ ಬಗ್ಗೆ ಆಲೋಚನೆ ಮಾಡಿಲ್ಲ. ಕೇವಲ ತಮ್ಮ ಸುಖಭಾಗ್ಯಕ್ಕೆ ಆ ಸ್ಥಾನವನ್ನು ಬಳಸಿಕೊಂಡರೇ ವಿನಃ ಒಂದು ಗಳಿಗೆಯೂ ಕ್ಷೇತ್ರದ ಜನರ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಮಾಜಿ ಸಿಎಂ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಚುನಾವಣೆ ಬರುತ್ತವೆ, ಹೋಗುತ್ತವೆ. ಆದರೆ, ಈ ಕ್ಷೇತ್ರದ ಅಭಿವೃದ್ಧಿಗೆ ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ. ಇದಕ್ಕೆ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಕೋಟ್ಯಂತರ ರೂ. ಸಾಕ್ಷಿ. ಕ್ಷೇತ್ರ ತೊರೆದವರು ಕೇವಲ ಒಂದು ನಿಮಿಷ ಪೆನ್ನು ಹಿಡಿದಿದ್ದರೆ ಚನ್ನಪಟ್ಟಣವನ್ನು ಚಿನ್ನ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ರಾಮನಗರ ಹಾಗೂ ಚನ್ನಪಟ್ಟಣ ಎರಡು ನನ್ನ ಕಣ್ಣು ಎನ್ನುತ್ತಿದ್ದವರು, ಎರಡೂ ಕ್ಷೇತ್ರವನ್ನು ಕುರುಡು ಮಾಡಿ ಪಲಾಯನ ಮಾಡಿದರು ಎಂದು ಕುಟುಕಿದರು.
ತಿಟ್ಟಮಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬೋರ್ವೆಲ್ ರಂಗನಾಥ್, ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಸಿ ಶೇಖರ್, ಕುಕ್ಕುಟ ಮಹಾಮಂಡಳ ಅಧ್ಯಕ್ಷ ಡಿ.ಕೆ.ಕಾಂತರಾಜು, ತಹಸೀಲ್ದಾರ್ ನರಸಿಂಹಮೂರ್ತಿ, ತಾಪಂ ಇಒ ಮನು, ಮುಖಂಡರಾದ ದುಂತೂರು ವಿಶ್ವನಾಥ್, ಎಂ.ಎ.ಕರುಣ್ ಸೇರಿ ಹಲವರು ಇದ್ದರು.