ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮನ್ವಯ ಸಭೆ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬಿ.ಎಸ್. ಪಾಟೀಲ ಮಾಡಗಿ, ರಮೇಶ ಜಿಗಜಿಣಗಿ, ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮತ್ತಿತರರಿದ್ದಾರೆ.  
ಜಿಲ್ಲೆ

ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ, ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಂಕಲ್ಪ

ವಿಜಯಪುರ: ವಿಧಾನ ಸಭೆ ಚುನಾವಣೆಯಲ್ಲಿ ಹಾವು ಮುಂಗುಸಿಯಂತೆ ಕಾದಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಪರಸ್ಪರ ಕೈ ಜೋಡಿಸುವ ಮೂಲಕ ಗಮನ ಸೆಳೆದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಸಭೆ ಸೇರಿದ ಉಭಯ ಪಕ್ಷಗಳ ನಾಯಕರು ಲೋಕಸಮರಕ್ಕೆ ಜಂಟಿ ತಾಲೀಮು ನಡೆಸಲು ಮುನ್ನುಡಿ ಬರೆದರಲ್ಲದೇ ಮೈತ್ರಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವಿಗೆ ಸಂಕಲ್ಪ ತೊಟ್ಟರು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವುದೇ ನಮ್ಮ ಧ್ಯೇಯ ಎಂದ ಉಭಯ ಪಕ್ಷಗಳ ನಾಯಕರು ಅದಕ್ಕಾಗಿ ಹಳೆಯ ಮನಃಸ್ತಾಪಗಳನ್ನೆಲ್ಲ ಬದಿಗೊತ್ತಿ ಒಮ್ಮತದಿಂದ ಚುನಾವಣೆ ಎದುರಿಸಲು ಪಣ ತೊಟ್ಟರು.

ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಎಸ್. ಪಾಟೀಲ ಮಾಡಗಿ, ಮೂಲತಃ ಜನತಾ ಪರಿವಾರದಿಂದ ಬಂದ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ. ಆ ಮೂಲಕ ರಾಜ್ಯದಲ್ಲಿ ಎನ್‌ಡಿಎಗೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವ ಮೂಲಕ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನ ಮಂತ್ರಿಯನ್ನಾಗಿಸುವುದು ನಮ್ಮ ಧ್ಯೇಯ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಅಭಿವೃದ್ಧಿಯ ದೇಶ ಎನ್ನಿಸಿಕೊಂಡಿದೆ. ಅದನ್ನು 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಮೋದಿ ಅವರ ಸಂಕಲ್ಪ. ಹೀಗಾಗಿ ಅನೇಕ ಪಕ್ಷಗಳು ಎನ್‌ಡಿಎ ಮೈತ್ರಿ ಬಯಸಿದ್ದು ಅದರಲ್ಲಿ ಜೆಡಿಎಸ್ ಕೂಡ ಒಂದು. ಕಾಂಗ್ರೆಸ್‌ನ ದುರಾಡಳಿತ ಕೊನೆಗಾಣಿಸುವುದೇ ಈ ಬಿಜೆಪಿ ಮತ್ತು ಜೆಡಿಎಸ್ ಗುರಿಯಾಗಿದೆ ಎಂದು ಕೂಚಬಾಳ ಹೇಳಿದರು.

ಈ ಹಿಂದೆ ತುರ್ತು ಪರಿಸ್ಥಿತಿ ಸಂದರ್ಭ ಕಾಂಗ್ರೆಸ್ ಕಿತ್ತೊಗೆಯಲು ಜನತಾ ಪರಿವಾರ ಶ್ರಮ ವಹಿಸಿತು. ಮಾಜಿ ಪ್ರಧಾನಿ ದೇವೇಗೌಡರು, ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್. ಪಟೇಲರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದರು. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕೂಡ ಅದೇ ಗರಡಿಯಲ್ಲಿದ್ದರು. ಕೊನೆಗೆ ಬಿಜೆಪಿ ಸೇರ್ಪಡೆಯಾದರು ಇದೀಗ ಮತ್ತದೇ ಜನತಾ ಪರಿವಾರದ ಭಾಗವಾಗಿದ್ದ ಜೆಡಿಎಸ್ ಜೊತೆ ಮೈತ್ರಿ ಸಾಧಿಸಿದ್ದು ಬಿಜೆಪಿ ಮತ್ತು ಜೆಡಿಎಸ್ ಸಿದ್ಧಾಂತಕ್ಕೆ ಪರಸ್ಪರ ಸಾಮ್ಯತೆ ಇದೆ. ಹೀಗಾಗಿ ಉಭವ ಪಕ್ಷಗಳ ನಾಯಕರು ಒಂದಾಗಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸಲಾಗುವುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಎಸ್. ಪಾಟೀಲ ಮಾಡಗಿ ಹೇಳಿದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೊಡಗಿ ಮಾತನಾಡಿ, ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಗೆಲ್ಲುವುದು ನಮ್ಮ ಗುರಿ. ಹಿಂದಿನ ಕಹಿ ಘಟನೆ ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಎಲ್ಲರೂ ಒಂದಾಗಿ ಚುನಾವಣೆ ಎದುರಿಸಬೇಕೆಂಬುದು ಕುಮಾರಸ್ವಾಮಿ ಅವರ ಅಭಿಪ್ರಾಯ. ಆ ನಿಟ್ಟಿನಲ್ಲಿ ಒಟ್ಟಾಗಿ ಶ್ರಮಿಸಲಾಗುವುದು ಎಂದರು.

ಇಂದು ಬಿಜೆಪಿಯಲ್ಲಿರುವ ಬಹುತೇಕರು ಜನತಾ ಪರಿವಾರದಿಂದಲೇ ಬಂದವರು. ಜಿಗಜಿಣಗಿ ಅವರು ಮೂಲತಃ ಜನತಾ ದಳದಿಂದಲೇ ಬಂದವರು. ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ ಹೀಗೆ ಅನೇಕರು ಜನತಾ ಪರಿವಾರದ ಭಾಗವಾಗಿದ್ದವರು. ನಾನೂ ಸಹ ಮೊದಲು ಬಿಜೆಪಿಯಲ್ಲಿದ್ದು ಈಗ ಜೆಡಿಎಸ್‌ನಿಂದ ಶಾಸಕನಾಗಿದ್ದೇನೆ. ಪರಸ್ಪರ ಕಾರ್ಯಕರ್ತರನ್ನು ಹಾಗೂ ಧ್ಯೇಯೋದ್ಧೇಶಗಳನ್ನು ಬಿಟ್ಟುಕೊಡದೇ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ನಾಡಿನ ಜನತೆಗೆ ಒಳ್ಳೆಯ ಸಂದೇಶ ಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ನನ್ನ ರಾಜಕಾರಣದ ನೆಲೆ ಹುಟ್ಟಿದ್ದೇ ಜನತಾದಳದಿಂದ. ರಾಮಕೃಷ್ಣ ಹೆಗಡೆ ಅವರ ದೇಹ ಸ್ಥಿತಿ ಸರಿಯಿಲ್ಲದಿದ್ದಾಗ ಅವರ ಮನೆಗೆ ಹೋಗಿ ಸಮಸ್ಕರಿಸಿ ಆ ಬಳಿಕವೇ ಪಕ್ಷದ ಕಚೇರಿಗೆ ಹೋಗುತ್ತಿದ್ದೆ. ಆಗ ಹೆಗಡೆ ಅವರು ಹೇಳಿದ ಮಾತು ಇನ್ನೂ ನೆನಪಿದೆ. ಒಂದು ಕಡೆ ದೇವೇಗೌಡರು ಇನ್ನೊಂದು ಕಡೆ ನಾನು ಆಗಿದ್ದು ಇನ್ಮುಂದೆ ಜೆಡಿಎಸ್ ಉಳಿಯಲ್ಲ ಎಂದು ಹೆಗಡೆ ಅವರು ಹೇಳಿದ್ದರು. ಹೀಗಾಗಿ ಭವಿಷ್ಯದಲ್ಲಿ ಬಿಜೆಪಿ ಮನೆ ಮನೆ ತಲುಪಲಿದೆ ಎಂದು ಭವಿಷ್ಯ ಅರಿತು ಬಿಜೆಪಿ ಸೇರಿದೆ. ಯಡಿಯೂರಪ್ಪ, ಅನಂತಕುಮಾರ ಅವರು ನನ್ನ ಕರೆದು ಬಿಜೆಪಿ ಸೇರ್ಪಡೆಗೊಳಿಸಿದರು. 2004 ರಲ್ಲಿ ನಾನು ಬಿಜೆಪಿ ಸೇರಿದ ಮೇಲೆ ಇದೀಗ ಒಂದಾಗಿದ್ದೇವೆ. ಒಂದಾಗಬೇಕೆಂಬ ನಿರ್ಣಯ ಆದಾಗಲೇ ನಾನು ಸ್ವಾಗತ ಮಾಡಿದೆ. ಜಿಲ್ಲೆಯಲ್ಲೂ ಒಂದಾಗಿ ಚುನಾವಣೆ ಮಾಡುವುದು ನನಗೂ ಸಂತೋಷ. ಅಧಿಕಾರದಲ್ಲಿರಲಿ ಬಿಡಲಿ ಎರಡೂ ಪಕ್ಷವನ್ನು ಸಮನಾಗಿ ತೆಗೆದುಕೊಂಡು ಹೋಗುವೆ. ಯಾವುದೇ ಜಾತಿ, ಪಕ್ಷ ಎಂಬ ಭೇದ ಭಾವ ಮಾಡದೇ ಎಲ್ಲರೂ ಒಟ್ಟಾಗಿ ಹೋಗುತ್ತೇನೆ ಎಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಕಾಸುಗೌಡ ಪಾಟೀಲ, ಸಂಜೀವ ಐಹೊಳಿ, ಜೆಡಿಎಸ್ ಮುಖಂಡರಾದ ಅಪ್ಪುಗೌಡ ಪಾಟೀಲ ಮನಗೂಳಿ, ಬಿ.ಡಿ. ಪಾಟೀಲ, ಬಸವರಾಜ ಹೊನವಾಡ ಮತ್ತಿತರರಿದ್ದರು.