ಶಿವಮೊಗ್ಗದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ರಘುಪತಿ ಭಟ್, ಶಾರದಾ ಪೂರ‌್ಯಾನಾಯ್ಕಾ, ಎಸ್.ಎಲ್.ಬೋಜೇಗೌಡ ಇದ್ದರು. 
ಜಿಲ್ಲೆ

ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲನೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಜೆಡಿಎಸ್ ಈಗ ಎನ್‌ಡಿಎ ಮೈತ್ರಿಕೂಟ ಸೇರಿರುವುದರಿಂದ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಕರಪತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂದು ಮುದ್ರಿಸಲು ತೀರ್ಮಾನಿಸಲಾಗಿದೆ. ಪ್ರಚಾರ ಸಭೆ, ಸಮಾರಂಭಗಳಲ್ಲಿ ಜೆಡಿಎಸ್-ಬಿಜೆಪಿ ನಾಯಕರು, ಮುಖಂಡರು ಒಟ್ಟಾಗಿ ಇರುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.

ಮೈತ್ರಿಯ ಗೊಂದಲ ನಿವಾರಿಸಿ ಒಗ್ಗಟ್ಟು ಪ್ರದರ್ಶನಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಸಣ್ಣಪುಟ್ಟ ಭಿನ್ನಾಭಿಪ್ರಾಯ ದೂರ ಮಾಡಿ ಗೊಂದಲರಹಿತವಾಗಿ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಕರಪತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂದು ಮುದ್ರಿಸಲಾಗುವುದು. ಬಿಜೆಪಿ ಚಿಹ್ನೆಯೂ ಇರಲಿದೆ. ಎರಡೂ ಪಕ್ಷದ ಕಾರ್ಯಕರ್ತರು ಸೇರಿ ಮನೆ ಮನೆ ಪ್ರಚಾರ ಮಾಡಲಿದ್ದಾರೆ ಎಂದರು.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಎರಡೂ ಪಕ್ಷಗಳ ಪ್ರಮುಖರು ಸಭೆ ನಡೆಸಿದ್ದಾರೆ. ಜೆಡಿಎಸ್ ಮತಗಳು ಬಿಜೆಪಿ ಅಭ್ಯರ್ಥಿಗೆ ಬರಬೇಕು. ಅದು ಬೇರೆ ಯಾವುದೇ ಅಭ್ಯರ್ಥಿಯ ಪಾಲಾಗಬಾರದು ಎಂಬ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ದೊರಕಿಸುವುದು ನಮ್ಮ ಗುರಿ ಎಂದು ಹೇಳಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಬಿ.ವೈ.ರಾಘವೇಂದ್ರ ಸಂಸದರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಪಕ್ಷದ ವರಿಷ್ಠರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ಕೊಡಿಸುವ ಜವಾಬ್ದಾರಿ ನನ್ನದಾಗಿದೆ. ರಾಘವೇಂದ್ರ ಅವರನ್ನು ಬೆಂಬಲಿಸಲು ನಮ್ಮ ಕಾರ್ಯಕರ್ತರು ತೀರ್ಮಾನಿಸಿದ್ದಾರೆ. ಹರಿಗೆ ವಾರ್ಡ್‌ನಿಂದ ಪ್ರಚಾರ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಮಾತನಾಡಿ, ತಳಮಟ್ಟದ ಕಾರ್ಯಕರ್ತರ ನಡುವೆ ಸಮನ್ವಯ ಕೊರತೆ ಇರುವುದು ಸಾಮಾನ್ಯ. ಅದನ್ನು ಸರಿಪಡಿಸುವ ಕೆಲಸವಾಗಿದೆ. ಗೊಂದಲಕ್ಕೆ ಅವಕಾಶ ಇಲ್ಲದಂತೆ ಸಭೆಗಳು ನಡೆಯಲಿವೆ. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ನಿರ್ಣಯದಂತೆ ಸಮನ್ವಯದಿಂದ ಪ್ರಚಾರ ಮಾಡುತ್ತೇವೆ. ಜೆಡಿಎಸ್ ಅಭ್ಯರ್ಥಿಗೆ ಬಿಜೆಪಿ, ಬಿಜೆಪಿ ಸ್ಪರ್ಧಿಸಿದ ಕಡೆ ಜೆಡಿಎಸ್‌ನವರು ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದರು.
ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಕೆ.ಜಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ಡಾ. ಧನಂಜಯ ಸರ್ಜಿ, ಗೀತಾ ಸತೀಶ್, ವಿರೂಪಾಕ್ಷಪ್ಪ, ಕಾಂತರಾಜ್ ಸೋಮಿನಕೊಪ್ಪ, ದೀಪಕ್ ಸಿಂಗ್ ಇತರರಿದ್ದರು.