ಜಿಲ್ಲೆ

ಬಾಡಿಗೆ ಕಾರ್ಯಕರ್ತರನ್ನು ಕರೆಸಿ ಎಲೆಕ್ಷನ್ ಮಾಡಿದೆ ಬಿಜೆಪಿ: ಜೆಡಿಎಸ್ ಆರೋಪ

ಹಾಸನ: ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಬಾಡಿಗೆ ಕಾರ್ಯಕರ್ತರನ್ನು ಕರೆಸಿದ್ದ ಶಾಸಕ ಪ್ರೀತಂ ಜೆ. ಗೌಡ ಗೂಂಡಾಗಳಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲ್ಲಿಸದಿದ್ದರೆ ಅಭಿವೃದ್ಧಿ ಕಾಮಗಾರಿ ತಡೆ ಹಿಡಿಯುವ ಬೆದರಿಕೆಯನ್ನು ಕೆಲ ಗ್ರಾಮಗಳಲ್ಲಿ ಹಾಕಿದ್ದಾರೆ. ಚುನಾವಣೆಗಾಗಿ ಬ್ಲಾೃಕ್ ಮೇಲ್ ಮಾಡುತ್ತಿರುವ ಶಾಸಕರು ಪ್ರಜಾಪ್ರಭುತ್ವಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಸಾಲಗಾಮೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಶಾಸಕ ಪ್ರೀತಂ ಜೆ. ಗೌಡ ಹಾಗೂ ಹಿಂಬಾಲಕರು ಭೇಟಿ ನೀಡಿ ಗ್ರಾಮಗಳಲ್ಲಿ ನೆಮ್ಮದಿ ಹಾಳು ಮಾಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸದಿದ್ದವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ಕ್ಯಾತನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕುಮಾರ್ ಗೆಲ್ಲುವ ನಿರೀಕ್ಷೆ ಇದೆ. ಆದ್ದರಿಂದ ಗೂಂಡಾಗಳನ್ನು ಬಿಟ್ಟು ಕುಮಾರ್, ಆತನ ಪತ್ನಿ ಮತ್ತು ಪುತ್ರನ ಮೇಲೆ ಸಂಜೆ ಹಲ್ಲೆ ಮಾಡಿಸಲಾಗಿದೆ. ಗಾಯಗೊಂಡಿರುವ ಕುಮಾರ್ ಹಾಗೂ ಕುಟುಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.