ಜಿಲ್ಲೆ

ಕಾಂಗ್ರೆಸ್-ಬಿಜೆಪಿ ಸಂಚಿನಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೋಲು

Kolar

ಕೋಲಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಕ್ಕಲೇರಿ ರಾಮಚಂದ್ರ ಸೋಲಿಗೆ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್‌ಕುಮಾರ್ ಹಾಗೂ ಸಂಸದ ಎಸ್.ಮುನಿಸ್ವಾಮಿ ಅವರ ಕುತಂತ್ರ ರಾಜಕಾರಣ ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಗುಡುಗಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ನಮಗೆ ಬಿಜೆಪಿಗಿಂತ ಹೆಚ್ಚಿನ ಸದಸ್ಯರ ಬೆಂಬಲವಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿಯ ಅನೇಕ ಮುಖಂಡರು ಜೆಡಿಎಸ್ ಜತೆ ಹೊಂದಾಣಿಕೆ ಬಯಸಿದ್ದರು. ಆದರೆ ಜೆಡಿಎಸ್ ಗೆಲ್ಲಬಾರದೆಂಬ ದುರುದ್ದೇಶದಿಂದ ರಮೇಶ್‌ಕುಮಾರ್ ಸಂಸದ ಮುನಿಸ್ವಾಮಿ ಜತೆ ರಹಸ್ಯವಾಗಿ ಮಾತುಕತೆ ನಡೆಸಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮುರಿದರು ಎಂದು ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ರಮೇಶ್‌ಕುಮಾರ್ ಸೇರಿ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಮುನಿಸ್ವಾಮಿ ಗೆಲವಿಗೆ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ, ಋಣ ತೀರಿಸುವಂತೆ ಸಂಸದರ ಮೇಲೆ ಒತ್ತಡ ಹಾಕಲಾಗಿತ್ತು. ಜಿಲ್ಲೆಯ ಹೊರಗೆ ಇಬ್ಬರೂ ಭೇಟಿಯಾಗಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳದಂತೆ ತಾಕೀತು ಮಾಡಿದ್ದರಿಂದ ಹೊಂದಾಣಿಕೆ ಪ್ರಸ್ತಾವನೆ ಸಾಧ್ಯವಾಗಲಿಲ್ಲ ಎಂದರು.

ಕೃತಜ್ಞತೆ ಇಲ್ಲದ ಮನುಷ್ಯ: ಶಾಸಕ ಕೆ.ಶ್ರೀನಿವಾಸಗೌಡ ಕೃತಜ್ಞತೆ ಇಲ್ಲದ ವ್ಯಕ್ತಿ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ವಕ್ಕಲೇರಿ ರಾಮಚಂದ್ರಗೆ ಬಿ.ಫಾರ್ಮ್ ನೀಡಲಾಗಿತ್ತು, ಇದು ನನ್ನ ಕಡೇ ಚುನಾವಣೆ ಎಂದು ಕೇಳಿಕೊಂಡಿದ್ದರಿಂದ ರಾಮು ತನಗೆ ನೀಡಿದ್ದ ಬಿ.ಫಾರ್ಮ್ ಅನ್ನು ಶ್ರೀನಿವಾಸಗೌಡರಿಗೆ ನೀಡಿದ್ದರು. ಗೆಲುವಿಗಾಗಿ ನಾನು ಪಟ್ಟ ಕಷ್ಟ ದೇವರಿಗೆ ಗೊತ್ತು, ದುಡ್ಡು ಒದಗಿಸಲು ಸಮಸ್ಯೆಯಾಗಿದ್ದಾಗ, ಎಲ್ಲರ ಬಳಿ ಕೈಚಾಚಿ ಸಂಪನ್ಮೂಲ ಕ್ರೋಡೀಕರಿಸಿಕೊಟ್ಟೆ, ಆದರೆ ಪಕ್ಷಕ್ಕೆ ದ್ರೋಹ ಬರೆದು ಕಾಂಗ್ರೆಸ್ ಅಭ್ಯರ್ಥಿಗೆ ವೋಟು ಹಾಕಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಾಲಿಗೆ ಶ್ರೀನಿವಾಸಗೌಡ ಇಲ್ಲ, ಜನರ ಮನಸ್ಸಿನಿಂದ ದೂರವಾಗಿರುವ ಸ್ವಾರ್ಥ ರಾಜಕಾರಣಿ ಕುರಿತು ಪ್ರಶ್ನೆ ಕೇಳಬೇಡಿ ಎಂದು ಸಿಡಿಮಿಡಿಗೊಂಡರು. ಶ್ರೀನಿವಾಸಗೌಡರನ್ನು ಉಚ್ಛಾಟನೆ ಮಾಡುವುದಿಲ್ಲ, ಒಂದು ವೇಳೆ ಶಿಸ್ತಿನ ಕ್ರಮ ಕೈಗೊಂಡಲ್ಲಿ ಸಿಕ್ಕಿದ್ದೇ ಚಾನ್ಸ್ ಎಂದು ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ನನಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕಿ ರೂಪಕಲಾ ಸಹಾಯ ಮಾಡಿದರೆಂಬುದು ಸತ್ಯಕ್ಕೆ ದೂರವಾದ ಮಾತು. ಕಾಂಗ್ರೆಸ್ ಮುಖಂಡರು ನನಗೆ ಸಹಾಯ ಮಾಡಿದ್ದರೆ ಗೆಲ್ಲುತ್ತಿದ್ದೆ, ಚುನಾವಣೆ ಎಂದ ಮೇಲೆ ಆರೋಪ ಸಹಜ, ನನ್ನ ಬಳಿ ಹಣ ಇದ್ದಿದ್ದರೆ ಸೋಲಾಗುತ್ತಿರಲಿಲ್ಲ ಎಂದು ಪರಾಜಿತ ಅಭ್ಯರ್ಥಿ ವಕ್ಕಲೇರಿ ರಾಮಚಂದ್ರ ತಿಳಿಸಿದರು.

ಮಾಲೂರು ಜೆಡಿಎಸ್ ಮುಖಂಡ ಜಿ.ಇ.ರಾಮೇಗೌಡ, ಜಿಪಂ ಮಾಜಿ ಸದಸ್ಯ ಕಿತ್ತಂಡೂರು ನಂಜುಂಡಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷೆ ಕೆ.ಆರ್.ರಾಜರಾಜೇಶ್ವರಿ, ಮುಖಂಡರಾದ ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್, ಸಿ.ಎಂ.ಆರ್.ಶ್ರೀನಾಥ್ ಇತರರಿದ್ದರು.