ಸವಣೂರ: ಶಿಗ್ಗಾಂವ-ಸವಣೂರ ಉಪ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಸೋಲುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.
ತಾಲೂಕಿನ ಚಿಲ್ಲೂರ-ಬಡ್ನಿ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹ್ಮದಖಾನ್ ಪಠಾಣ ಪರ ಬಹಿರಂಗ ಪ್ರಚಾರ ಕೈಗೊಂಡು ಮತಯಾಚಿಸಿ ಮಾತನಾಡಿದರು.
2018ರ ಚುನಾವಣೆಯಲ್ಲಿ ಬಿಜೆಪಿ 600 ಭರವಸೆ ನೀಡಿ ಶೇ.10ರಷ್ಟೂ ಈಡೇರಿಸದೇ ಜನರಿಗೆ ಮೋಸ ಮಾಡಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಡವರಿಗಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳನ್ನು ನೀಡಿದ್ದೇವೆ. ಇದರಿಂದಾಗಿ ಬಿಜೆಪಿಯವರಿಗೆ ಹೊಟ್ಟೆಯುರಿ ಜತೆಗೆ ಸೋಲಿನ ಭಯವೂ ಕಾಡುತ್ತಿದೆ ಎಂದರು.
ನಾನು ಯಾವ ಯಡಿಯೂರಪ್ಪನಿಗೆ, ಬಸವರಾಜ ಬೊಮ್ಮಾಯಿಗೆ, ವಿಜಯೇಂದ್ರನಿಗೂ ಜಗ್ಗಲ್ಲ ಬಗ್ಗಲ್ಲ. ಇದು ಜನರಲ್ ಚುನಾವಣೆಯಲ್ಲ ಇದು ಉಪ ಚುನಾವಣೆ, ನೀವು ತಿಪ್ಪರಲಾಗ ಹಾಕಿದರೂ ಕೂಡ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿಯವರು 3 ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸುಳ್ಳು ಆರೋಪ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಸವರಾಜ ಬೊಮ್ಮಾಯಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಕೇವಲ ಹುಸಿ ಭರವಸೆಗಳನ್ನೇ ನೀಡುತ್ತಾ ಬಂದಿದ್ದಾರೆ. ಶಿಗ್ಗಾಂವ-ಸವಣೂರ ಕ್ಷೇತ್ರದ ಮತದಾರರು ನ. 13ರಂದು ಕಾಂಗ್ರೆಸ್ನ ಸಾಮಾನ್ಯ ಅಭ್ಯರ್ಥಿ ಯಾಸೀರಅಹ್ಮದಖಾನ ಪಠಾಣ ಅವರಿಗೆ ಮತನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಸಚಿವರಾದ ಈಶ್ವರ ಖಂಡ್ರೆ, ಮಲ್ಲಿಕಾರ್ಜುನ ಶಾಮನೂರ, ಮಾಜಿ ಸಚಿವ ಎಚ್. ಆಂಜನೇಯ, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚೇತಕ ಸಲೀಂ ಅಹ್ಮದ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಇದ್ದರು.