ಬಳ್ಳಾರಿ: ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹ, ಯಡಿಯೂರಪ್ಪ ಸಿ.ಎಂ.ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah )ಹೇಳಿದರು.
ಬಳ್ಳಾರಿಯ JSW ಅತಿಥಿಗೃಹದಲ್ಲಿ ಶನಿವಾರ(ನ.09) ಸುದ್ದಿಗಾರರ ಜತೆ ಮಾತನಾಡಿದರು. ಕರೊನಾ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಹಗರಣ ನಡೆದಿದೆ, ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದ ಆಯೋಗ ರಚಿಸಲಾಗಿದೆ, ವರದಿ ಇನ್ನೂ ಕೈ ಸೇರಿಲ್ಲ, ಪತ್ರಿಕೆಯಲ್ಲಿ ಓದಿದ್ದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದೇನೆ. ನ್ಯಾಯಾಲಯವಿದೆ. ಸತ್ಯಾಸತ್ಯತೆ ಬಯಲಾಗಲಿದೆ. ಆಯೋಗದ ವರದಿ ಬರಲಿ, ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟಿರುವ ದುರ್ಘಟನೆಗಳು ನಡೆದವು. ಇದನ್ನೂ ಸಚಿವರಾಗಿದ್ದ ಸುಧಾಕರ್ ಸುಳ್ಳು ಸುಳ್ಳು ಎಂದರು. ನಾನು ಮತ್ತು ಡಿಕೆಶಿ ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಅಲ್ಲಿ ಸಮಸ್ಯೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಲಾಯಿತು ಎಂದರು.
ಸಾಲು ಸಾಲು ಹಗಣರಾಗಲ್ಲಿ ಸಿಲುಕಿದ್ದು, ಶೀಘ್ರದಲ್ಲೇ ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ಉತ್ತರಿಸಿದ ಸಿಎಂ, ನಾನು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವವನು. ನಾನು ಸಣ್ಣ ತಪ್ಪೂ ಮಾಡಿಲ್ಲ, ಮಾಡೋದು ಇಲ್ಲ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ 2 ಸಾವಿರ ಕೋಟಿ ರೂ. ಕೊಟ್ಟು ಮುಖ್ಯಮಂತ್ರಿ ಆದ್ರು. ಇವರ ಪುತ್ರ ವಿಜಯೇಂದ್ರ ಕೂಡ ದುಡ್ಡು ಕೊಟ್ಟೇ ಪಕ್ಷದ ಅಧ್ಯಕ್ಷ ಆಗಿದ್ದು ಅಂತ ಯತ್ನಾಳ್ ಅವರೇ ಹೇಳಿದ್ದಾರೆ. ಇವರಿಗೆ ಸಾವಿರ ಸಾವಿರ ಕೋಟಿ ಎಲ್ಲಿಂದ ಬಂತು? ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕು ಎಂದರು.ಗೃಹಲಕ್ಷ್ಮಿಗೆ ಹಂಚಲು ಹಣ ಇಲ್ಲ ಅಂತ ದೇವೇಗೌಡರ ಹೇಳಿಕೆಗೆ, ಅವರ ಮಾತು ಸುಳ್ಳು. ಅಕ್ಟೋಬರ್ ವರೆಗೂ ಒಂದು ತಿಂಗಳದ್ದೂ ಮಿಸ್ಸಾಗದೆ ಗೃಹಲಕ್ಷ್ಮಿ ಹಣ ನೀಡಿದ್ದೇವೆ ಅಂದರೆ ಏನು ಅರ್ಥ? ನವೆಂಬರ್ ತಿಂಗಳದ್ದೂ ಸದ್ಯದಲ್ಲೇ ಹಾಕ್ತೀವಿ ಎಂದರು.
ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರ್ಕಾರವೇ 216 ಮಂದಿ ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇದು ನಮ್ಮ ಸ್ಪಷ್ಟ ತೀರ್ಮಾನ. ನೋಟಿಸ್ ಗಳನ್ನು ಹಿಂಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದ್ದೇನೆ. ಬಿಜೆಪಿ ಅವರಿಗೆ ಮನ ಮರ್ಯಾದೆ ಇಲ್ಲ, ಚುನಾವಣೆ ಪ್ರಣಾಳಿಕೆಯಲ್ಲಿ ಅವರೇ ಹೇಳಿದ್ರು, ರಾಜಕೀಯಕ್ಕಾಗಿ ವಕ್ಫ್ ಕುರಿತು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು.