ಲೋಕಾಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಾನಂದ ಉದಪುಡಿ, ಸುಭಾಸ ಗಸ್ತಿ, ಗೋವಿಂದ ಕೌಲಗಿ, ಲಕ್ಷ್ಮಣ ಮಾಲಗಿ, ಗುರುರಾಜ ಉದಪುಡಿ ಇತರರಿದ್ದರು. 
ಜಿಲ್ಲೆ

ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಬಿಜೆಪಿ ಅಡ್ಡಿ ಸಲ್ಲ

ಲೋಕಾಪುರ: ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಪಟ್ಟಣದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಡೆತಡೆ ಉಂಟು ಮಾಡುತ್ತಿರುವುದು ಖೇದಕರ ಸಂಗತಿ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಪ್ರಶ್ನಿಸಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಟಣದ ಬಸ್ ನಿಲ್ದಾಣ ಬಳಿಯ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ 87 ಲಕ್ಷ ರೂ. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಚಾಲನೆ ನೀಡಿದರೆ, ಅದಕ್ಕೆ ಅಡೆತಡೆ ಉಂಟು ಮಾಡುವ ಮೂಲಕ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವಧಿಯಲ್ಲಿ ಮುಧೋಳದಲ್ಲಿ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲಿಲ್ಲ. ಇದು ಬಡವರ ಮೇಲೆ ಅವರು ತೋರಿದ ಪ್ರೀತಿ ತಿಳಿಸುತ್ತದೆ ಎಂಬುದನ್ನು ಅರಿಯಬೇಕು ಎಂದರು.

ಇಂದಿರಾ ಕ್ಯಾಂಟೀನ್ ನಿರ್ಮಿಸಿ ಉಳಿದ ಜಾಗದಲ್ಲಿ ಮಿನಿ ವಿಧಾನಸೌಧ ಮಾಡಲಿಕ್ಕೆ ನಮ್ಮ ಅಭ್ಯಂತರವಿಲ್ಲ. ಮಿನಿ ವಿಧಾನಸೌಧ ಹಾಗೂ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಬರುವ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್‌ನಿಂದ ಅನುಕೂಲವಾಗುತ್ತದೆ. ಲೋಕಾಪುರದಲ್ಲಿ ಚರಂಡಿ ಕಾಮಗಾರಿ, ರಸ್ತೆಗಳು ಕಾರಜೋಳ ಅವರ ಅವಧಿಯಲ್ಲಿ ನಡೆದಿವೆ. ಬಿಜೆಪಿ ಮುಖಂಡರು ಈಗ ಕಳಪೆ ಕಾಮಗಾರಿ ಎಂದು ಆರೋಪಿಸುತ್ತಿದ್ದಾರೆ. ಇದರಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಪಡೆದುಕೊಂಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಉತ್ತರಿಸಬೇಕೆಂದು ಆಗ್ರಹಿಸಿದರು.

ಅಹಿಂದ ಸಂಘಟನೆ ಅಧ್ಯಕ್ಷ ಗೋವಿಂದಪ್ಪ ಕೌಲಗಿ ಮಾತನಾಡಿ, 20 ವರ್ಷ ಮುಧೋಳ ಮತಕ್ಷೇತ್ರವನ್ನು ಆಡಳಿತ ಮಾಡಿದ ಸಂಸದ ಗೋವಿಂದ ಕಾರಜೋಳ ಅವರು ಲೋಕಾಪುರಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲಿಲ್ಲ. ಪಟ್ಟಣದ ಹಳೇ ಊರಲ್ಲೂ ವರ್ಚಗಲ್ಲ ಕೆರೆಯಿಂದ ಅಶುದ್ಧ ನೀರು ಬರುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಸುಭಾಸ ಗಸ್ತಿ, ಗುರುರಾಜ ಉದಪುಡಿ ಮಾತನಾಡಿ, ಬಿಜೆಪಿ ಮುಖಂಡರ ನಡೆ ಖಂಡಿಸಿದರು.
ಪಿಕೆಪಿಎಸ್ ಮಾಜಿ ಅಧ್ಯಕ್ಷ ಆನಂದ ಹಿರೇಮಠ, ಕೆಎಂಎ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಸುರೇಶ ಸಿದ್ದಾಪುರ, ಮುತ್ತಪ್ಪ ಗಡ್ಡದವರ, ರವಿ ರೊಡ್ಡಪ್ಪನವರ, ಕೃಷ್ಣಾ ಹೂಗಾರ, ಮುತ್ತಪ್ಪ ಚೌಧರಿ, ಅಬ್ದುಲ್‌ರಹಿಮಾನ್ ತೊರಗಲ್ ಇತರರಿದ್ದರು.