ಚೇರಂಬಾಣೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು. ತಳೂರು ಕಿಶೋರ್‌ಕುಮಾರ್, ಮಹೇಶ್ ಜೈನಿ, ರೀನಾ ಪ್ರಕಾಶ್, ಸುಜಾ ಕುಶಾಲಪ್ಪ, ರವಿ ಕಾಳಪ್ಪ ಇದ್ದರು.  
ಜಿಲ್ಲೆ

ಸುವರ್ಣ ಯುಗ ನಿರ್ಮಾಣಕ್ಕೆ ಬಿಜೆಪಿ ಅಗತ್ಯ

ಲೋಕೇಶ್ ಮನು. ಡಿ

ಮಡಿಕೇರಿ: ಮುಂದಿನ ಪೀಳಿಗೆಗೆ ಸುವರ್ಣ ಯುಗ ನಿರ್ಮಿಸಲು ದೇಶದಲ್ಲಿ ಬಿಜೆಪಿ ಆಡಳಿತ ಇರುವ ಅಗತ್ಯವಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.


ಶುಕ್ರವಾರದಿಂದ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ ಯದುವೀರ್ ಮಡಿಕೇರಿ ತಾಲೂಕು ಚೇರಂಬಾಣೆಯಲ್ಲಿ ಆಯೋಜಿಸಿದ್ದ ತಮ್ಮ ಪ್ರಥಮ ಪ್ರಚಾರ ಸಭೆಯಲ್ಲಿ ಚೇರಂಬಾಣೆ, ಭಾಗಮಂಡಲ, ಕುಂದಚೇರಿ, ಬೆಟ್ಟಗೇರಿ, ಅಯ್ಯಂಗೇರಿ ಗ್ರಾಮ ವ್ಯಾಪ್ತಿಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ವಿಕಸಿತ ಭಾರತದ ಮೋದಿ ಆಶಯಕ್ಕೆ ಪೂರಕವಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮ ತಾತ ಪ್ರಜಾಪ್ರಭುತ್ವದ ತತ್ವಗಳಿಗೆ ಅನುಗುಣವಾಗಿ ಮೈಸೂರು ಸಂಸ್ಥಾನ ವಿಸರ್ಜನೆ ಮಾಡಿ ಅಖಂಡ ಭಾರತದಲ್ಲಿ ಒಂದಾದರು. ಅಲ್ಲಿಗೆ ರಾಜ ಪ್ರಭುತ್ವದ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ಜಾರಿಗೆ ಬಂದಿದೆ. ಸಂವಿಧಾನದಡಿ ರಾಜ-ಪ್ರಜೆ ಎನ್ನುವ ಭೇದ ಇಲ್ಲ. ಮೈಸೂರು ದಸರಾ, ಮೈಸೂರು ಅರಮನೆಯನ್ನು ಈಗ ಯಾರೂ ಬೇಕಾದರೂ ಸಂದರ್ಶಿಸಬಹುದು. ಯದುವೀರ್ ಸಂಸದರಾದರೆ ಜನಸಾಮಾನ್ಯರಿಗೆ ಸಿಗುತ್ತಾರಾ ಎನ್ನುವ ಪ್ರಶ್ನೆ ಎಲ್ಲ ಕಡೆ ಇದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಸಂಸದರ ಪ್ರತ್ಯೇಕ ಕಚೇರಿಯೇ ಇರುತ್ತದೆ. ಇದು ನನ್ನ ಕಚೇರಿ ಅಲ್ಲ. ನಮ್ಮ ಕಾರ್ಯಕರ್ತರ ಕಚೇರಿ ಆಗಿರುತ್ತದೆ ಎಂದು ಹೇಳಿದರು.


ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ , ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ , ವಿಧಾನ ಪರಿಷತ್ತು ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್‌ಕುಮಾರ್, ವಕ್ತಾರರಾದ ತಳೂರು ಕಿಶೋರ್‌ಕುಮಾರ್, ಬಿ.ಕೆ. ಅರುಣ್ ಕುಮಾರ್, ಸುಬ್ರಮಣ್ಯ ಉಪಾಧ್ಯಯ, ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಫ್ರು ರವೀಂದ್ರ, ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಮುಖರಾದ ಕಾಂಗೀರ ಸತೀಶ್, ಕಾರೇರ ಕವನ್ ಕಾವೇರಪ್ಪ, ಪಿ.ಡಿ. ಪೊನ್ನಪ್ಪ, ಡೀನ್ ಬೋಪಣ್ಣ, ಬಿ.ಎಂ. ಹರೀಶ್, ರೀನಾ ಪ್ರಕಾಶ್ ಇತರರು ಇದ್ದರು.

ಚೇರಂಬಾಣೆಯ ಸಭೆ ನಂತರ ಸಂಪಾಜೆಯಲ್ಲಿ ಸಂಪಾಜೆ, ಚೆಂಬು, ಪೆರಾಜೆ, ಮದೆನಾಡು ಗ್ರಾಮವ್ಯಾಪ್ತಿಯ ಸಭೆ ಮತ್ತು ಮೂರ್ನಾಡುವಿನಲ್ಲಿ ಮೂರ್ನಾಡು, ಮರಗೋಡು, ಹೊಸ್ಕೆರಿ, ಹಾಕತ್ತೂರು, ಹೊದ್ದೂರು, ಪಾರಾಣೆ, ಚೆಯ್ಯಂಡಾಣೆ, ಮೇಕೇರಿ ಗ್ರಾಮ ವ್ಯಾಪ್ತಿಯ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು.