ಗಂಗಾವತಿ: ಕೋಮುವಾದ ಶಕ್ತಿ ಮಣಿಸಲು ಸಾರ್ವಜನಿಕರು ಒಂದಾಗಬೇಕಿದ್ದು, ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ಸಂಘಟಿತರಾಗಬೇಕು ಎಂದು ಸಿಪಿಐ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಮೈತ್ರಿ ಕೃಷ್ಣನ್ ಕರೆ ನೀಡಿದರು.
ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಸಿಪಿಐ ಲಿಬರೇಷನ್ ಜಿಲ್ಲಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಜಿಲ್ಲಾಮಟ್ಟದ 2ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೋಮುವಾದವನ್ನು ಬಿಜೆಪಿ ಮುನ್ನೆಲೆಗೆ ತಂದು ಸಮಾಜದಲ್ಲಿ ಒಡಕು ಮೂಡಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಗಂಭೀರ ಪರಿಗಣಿಸುತ್ತಿಲ್ಲ. ಕಾರ್ಮಿಕರ ದುಡಿಯುವ ಅವಧಿ ಹೆಚ್ಚಿಸುತ್ತಿದ್ದು, ರೈತರಿಗೆ ನೀಡುತ್ತಿದ್ದ ಸಬ್ಸಿಡಿ ಕಡಿತವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಕಾರ್ಪೊರೇಟ್ ಬಂಡವಾಳಗಾರರ 14 ಲಕ್ಷ ಕೋಟಿ ರೂ. ಹೆಚ್ಚು ಸಾಲ ಮನ್ನಾ ಮಾಡಿ, ಜನರ ಮೇಲೆ ತೆರಿಗೆ ಹೊರೆ ಹಾಕುತ್ತಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ಪಿ.ಆರ್.ಎಸ್ ಮಣಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಬರಗಾಲ, ಗುಳೆ, ನೀರಿನ ಸಮಸ್ಯೆ, ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣ ವಿಲವಾಗಿವೆ. ದುಡಿಯುವ ಜನರನ್ನು ಸಂವಿಧಾನ ವಿರೋಧಿ ಕಾನೂನುಗಳ ಮೂಲಕ ಹತ್ತಿಕ್ಕುವ ಯತ್ನ ನಡೆಯುತ್ತಿದೆ ಎಂದರು.
ಹದಿನಾರು ಸದಸ್ಯರನ್ನೊಳಗೊಂಡ ಜಿಲ್ಲಾ ಸಮಿತಿ ರಚಿಸಿ ಜಾಗೃತಿ ರ‌್ಯಾಲಿ ನಡೆಸಲಾಯಿತು. ರಾಯಚೂರು ಜಿಲ್ಲೆ ಕಾರ್ಯದರ್ಶಿ ನಾಗರಾಜ ಪೂಜಾರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ವಿಜಯ್ ದೊರೈರಾಜ್, ಪದಾಧಿಕಾರಿಗಳಾದ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಂ, ಹುಲಿಗೆಮ್ಮ, ರಾಘಮ್ಮ ಇತರರಿದ್ದರು.