ಜಿಲ್ಲೆ

ಸರ್ಕಾರ ಉರುಳಿಸುವುದರಲ್ಲಿ ಬಿಜೆಪಿಗರು ಪ್ರವೀಣರು: ಸತೀಶ್ ಜಾರಕಿಹೊಳಿ ಟಾಂಗ್

ಬೆಳಗಾವಿ: ಬಿಜೆಪಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಲು ತಂತ್ರಗಳನ್ನು ಮಾಡುತ್ತಿರಬಹುದು ಅಥವಾ ಇಲ್ಲದಿರಬಹುದು. ಆದರೆ, ಕಾಂಗ್ರೆಸ್‌ನವರು ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಸರ್ಕಾರ ಅಸ್ಥಿರಗೊಳಿಸಲು ಮಾಡುತ್ತಿರುವ ಪ್ರಯತ್ನವೇನೂ ಹೊಸ ವಿಚಾರವಲ್ಲ. ಜನರಿಂದ ಆಯ್ಕೆಯಾದ ಸರ್ಕಾರ ಉರುಳಿಸುವುದರಲ್ಲಿ ಅವರು ಪ್ರವೀಣರಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಅನೇಕ ಸರ್ಕಾರ ಪತನಗೊಳಿಸಿದ್ದಾರೆ. ಬಿಜೆಪಿಯವರು ಸುಮ್ಮನೆ ಕುಳಿತುಕೊಳ್ಳುವವರು ಅಲ್ಲ. ನಾವು ಎಚ್ಚರಿಕೆಯಿಂದ ಇರಬೇಕು ಎಂದರು. ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಈ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೋಡಿಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.