ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬೆನ್ ಮೋಸೆಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಜಿಲ್ಲೆ

ಅಭಿವೃದ್ಧಿ ಹೆಸರಲ್ಲಿ ಮತಕೇಳಲು ಬಿಜೆಪಿಗೆ ತಾಕತ್ತಿಲ್ಲ

ಚಿಕ್ಕಮಗಳೂರು: ಅಭಿವೃದ್ಧಿ ಹೆಸರಲ್ಲಿ ಮತ ಕೇಳಲು ತಾಕತ್ತಿಲ್ಲದ ಬಿಜೆಪಿ ಮೋದಿ ಗ್ಯಾರಂಟಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸಸ್ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಗ್ಯಾರಂಟಿ ಶ್ರೀಮಂತರಿಗೇ ಹೊರತು ಬಡವರಿಗಲ್ಲ. ಇದುವರೆಗೆ ಮೋದಿ ಅನುಕೂಲ ಮಾಡಿಕೊಟ್ಟಿರುವುದು ಹಾಗೂ ಲಕ್ಷಾಂತರ ಕೋಟಿ ಸಾಲವನ್ನಾ ಮಾಡಿರುವುದು ಶ್ರೀಮಂತರದ್ದು ಮಾತ್ರ. ಇದೇ ಮೋದಿ ಗ್ಯಾರಂಟಿ ಎಂದು ದೂರಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸರಳ ಸಜ್ಜನ ರಾಜಕಾರಣಿ. ವಿರೋಧ ಪಕ್ಷದವರಿಗಾಗಲಿ, ಅವರ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿಯ ವಿರುದ್ಧವಾಗಲಿ ಯಾವುದೇ ಹೇಳಿಕೆಗಳನ್ನು ಕೊಡದೇ ಇರುವಷ್ಟು ಸರಳರು. ಅವರು ೨೦ ತಿಂಗಳ ಅಧಿಕಾರದ ಅವಧಿಯಲ್ಲಿ ಶಕ್ತಿ ಮೀರಿ ಕಡೂರು-ಮೂಡಿಗೆರೆ-ಚಿಕ್ಕಮಗಳೂರು ಹೆದ್ದಾರಿ ನಿರ್ಮಾಣಕ್ಕೆ ಮೂಲ ಕಾರಣಕರ್ತರಾಗಿದ್ದಾರೆ. ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರ ಗಮನ ಸೆಳೆದು ಜಿಲ್ಲೆಗೆ ರೈಲ್ವೇ ಸಂಪರ್ಕ ಕೊಡಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ೧.೫೦ ಲಕ್ಷ ಮತಗಳ ಅಂತರದಿಎಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಯಪ್ರಕಾಶ್ ಹೆಗ್ಡೆ ಅವರು ಅಧಿಕಾರದಿಂದ ಇಳಿದ ಬಳಿಕ ಶೋಭಾ ಕರಂದ್ಲಾಜೆ ೧೦ ವರ್ಷ ಸಂಸದರಾಗಿದ್ದರೂ ಜಿಲ್ಲೆಗೆ ಒಂದೇ ಒಂದು ಎಕ್ಸ್ ಪ್ರೆಸ್ ರೈಲನ್ನು ತರಲಿಲ್ಲ. ಜೊತೆಗೆ ಚಿಕ್ಕಮಗಳೂರಿನಿಂದ ಸಕಲೇಶಪುರ, ಹಾಸನಕ್ಕೆ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲಿಲ್ಲ. ಇದೇ ಬಿಜೆಪಿಯವರ ಮೋದಿ ಗ್ಯಾರಂಟಿ. ಅಭಿವೃದ್ಧಿ ತೋರಿಸಿ ಚುನಾವಣೆ ಎದುರಿಸಲು ಯೋಗ್ಯತೆ ಇಲ್ಲದ ಬಿಜೆಪಿಗರು ವ್ಯಕ್ತಿಯನ್ನು ತೋರಿಸಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಸಿ.ಟಿ.ರವಿ ಅಧಿಕಾರವಿಲ್ಲದೆ ಪರದಾಡುತ್ತಿದ್ದಾರೆ. ಅತ್ತ ಶಾಸಕ ಸ್ಥಾನವೂ ಇಲ್ಲ ಇತ್ತ ಪಕ್ಷದಲ್ಲಿಯೂ ಯಾವ ಸ್ಥಾನವು ಇಲ್ಲದೆ ಕಂಗಾಲಾಗಿ ಚುನಾವಣೆಯ ಬಳಿಕ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬೊಗಳೆ ಬಿಡುತ್ತಿದ್ದಾರೆ. ಈಗಿನ ಬಿಜೆಪಿ ಪರಿಸ್ಥಿತಿ ನೋಡಿದರೆ ಮುಂದಿನ ಬಾರಿ ಅವರಿಗೆ ಶಾಸಕ ಸ್ಥಾನದ ಟಿಕೆಟ್ ಸಿಗುವುದೇ ಅನುಮಾನವಾಗಿದೆ. ಕಾಂಗ್ರೆಸ್ ಭವಿಷ್ಯದ ಬಗ್ಗೆ ಮಾತನಾಡುವ ಬದಲು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷ ಚುನಾವಣೆಯ ಮುನ್ನ ನೀಡಿದ್ದ ೫ ಗ್ಯಾರಂಟಿಗಳ ಭರವಸೆಯನ್ನು ಈಗಾಗಲೇ ಈಡೇರಿಸಿದೆ. ಈ ಗ್ಯಾರಂಟಿಗಳನ್ನು ಕೇವಲ ಕಾಂಗ್ರೆಸ್ಸಿಗರಿಗೆ ನೀಡದೆ ಎಲ್ಲ ಜಾತಿ, ಪಕ್ಷ ಮತ್ತು ಧರ್ಮದವರಿಗೂ ನೀಡಿ ನುಡಿದಂತೆ ನಡೆದ ಸರ್ಕಾರವೆಂದು ಸಾಬೀತು ಮಾಡಿದೆ. ಬಿಜೆಪಿಯವರು ಗ್ಯಾರಂಟಿಯ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದರು. ನಂತರ ತಾವೇ ಚುನಾವಣೆಯ ಸಂದರ್ಭದಲ್ಲಿ ಅನೇಕ ಗ್ಯಾರಂಟಿಗಳನ್ನು ಘೋಷಿಸಿದರು. ಈಗ ಮೋದಿ ಪರಿವಾರ, ಮೋದಿ ಗ್ಯಾರಂಟಿ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯ ಚುನಾವಣಾ ಬಾಂಡ್ ಹಗರಣ ಬಹಿರಂಗವಾದ್ದರಿAದ ಕೇಂದ್ರ ಸರ್ಕಾರವು ಅದನ್ನು ಮುಚ್ಚಿ ಹಾಕುವ ಸಲುವಾಗಿ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮೂರುವರೆ ಸಾವಿರ ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೆದ್ದೆತ್ತಿನ ಬಾಲ ಹಿಡಿಯುವ ಜೆಡಿಎಸ್ ಕೇವಲ ಮೂರು ಸ್ಥಾನಕ್ಕಾಗಿ ಬಿಜೆಪಿಯವರೊಂದಿಗೆ ಗುದ್ದಾಡಿದೆ. ಪಡೆದ ಮೂರು ಸೀಟಿನಲ್ಲಿ ಕೋಲಾರ ಬಿಟ್ಟರೆ ಎರಡು ಕಡೆ ಕುಟುಂಬಸ್ಥರನ್ನೇ ನಿಲ್ಲಿಸಿದ ಕೀರ್ತಿ ದೇವೇಗೌಡರದು. ಚುನಾವಣೆ ನಂತರ ಜೆಡಿಎಸ್ ಧೂಳಿಪಟ ಮಾಡುವ ಸಲುವಾಗಿ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಮಾತ್ರ ಬಿಜೆಪಿ ವೇದಿಕೆಯಲ್ಲಿದ್ದರೆ ಚಿಕ್ಕಮಗಳೂರಿನಲ್ಲಿ ಬೋಜೇಗೌಡರು ಮಾತ್ರ ಬಿಜೆಪಿ ವೇದಿಕೆಯಲ್ಲಿರುತ್ತಾರೆ. ಆದರೆ ಕಾರ್ಯಕರ್ತರು ಇವರ ಡೋಂಗಿ ಜಾತ್ಯಾತೀತತೆ ಕಂಡು ಬೇಸರಗೊಂಡು ಈ ಬಾರಿ ಕಾಂಗ್ರೆಸ್ಸಿಗೆ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಕುಮಾರ್, ಪ್ರಕಾಶ್ ರೈ, ರಾಮಚಂದ್ರ, ಸುರೇಶ್, ಭರತ್, ಶಭಾನ ಸುಲ್ತಾನ ಮತ್ತಿತರರಿದ್ದರು.