ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸುವ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು, ಮುಂದಿನ ಕ್ರಮಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೂ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಗಾರರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಅದ್ಯಕ್ಷ ತಿಪ್ಪಣ್ಣ ಮಜ್ಜಗಿ ದೂರಿದ್ದಾರೆ.
ಮಹಾನಗರ ಪಾಲಿಕೆ ಪ್ರತ್ಯೇಕಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಯಾವುದೇ ರೀತಿಯಲ್ಲಿ ವಿರೋಧ ಮಾಡಿಲ್ಲ. ಆದರೂ, ಪ್ರತ್ಯೇಕ ಪಾಲಿಕೆ ಹೋರಾಟಗಾರರು ಅವರ ವಿರುದ್ಧ ಕಪು್ಪ ಬಾವುಟ ಪ್ರದರ್ಶಿಸುವ ಹೇಳಿಕೆ ನೀಡುವುದು ಸರಿಯಲ್ಲ. ಈ ಹೇಳಿಕೆ ರಾಜಕೀಯ ಪ್ರೇರಿತವಾದದ್ದು ಎಂದು ಹೇಳಿದ್ದಾರೆ.
ಪಾಲಿಕೆ ಪ್ರತ್ಯೇಕಗೊಳಿಸುವುದು ಆತುರದ ನಿರ್ಧಾರ. ಈ ನಿರ್ಧಾರ ಕೈಗೊಳ್ಳುವ ಮುಂಚೆ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿಯಲ್ ಅಸೋಸಿಯೇಶನ್, ವಕೀಲರ ಸಂಘಗಳು, ಇತರ ಸಂಘಟನೆಗಳು, ವರ್ತಕರು, ಸಾಹಿತಿಗಳು, ಪ್ರಬುದ್ಧರನ್ನು ಕರೆದು ರ್ಚಚಿಸಬೇಕಿತ್ತು. ಆದರೂ, ಪ್ರಲ್ಹಾದ ಜೋಶಿ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಅವರು ಪ್ರತ್ಯೇಕ ಪಾಲಿಕೆಗೆ ಯಾವತ್ತಿಗೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಪ್ಪಣ್ಣ ಮಜ್ಜಗಿ ಸ್ಪಷ್ಟಪಡಿಸಿದ್ದಾರೆ.
ಮಹಾನಗರ ಪಾಲಿಕೆಯ ಈಗಿನ 82 ಸದಸ್ಯರ ಅವಧಿ ಮುಗಿದ ನಂತರ ಪಾಲಿಕೆ ಪ್ರತ್ಯೇಕಗೊಳಿಸುವುದು ಸೂಕ್ತ ಎಂಬುದಷ್ಟೇ ನಮ್ಮ ವಾದ. ಈ ನಿಟ್ಟಿನಲ್ಲಿ ಈಗಿರುವ ಸದಸ್ಯರ ಅವಧಿ ಮೊಟಕಗೊಳಿಸದಿರುವುದು ಸೂಕ್ತ. ಆದಕಾರಣ, ಅನಗತ್ಯ ಹೇಳಿಕೆ ನೀಡುವುದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.